ಮಂಗಳೂರು, ಮೇ24(Daijiworld News/SS): ಉದ್ಯೋಗ ಅರಸಿ ಏಜೆನ್ಸಿಯೊಂದರ ಮೂಲಕ ಕುವೈತ್ಗೆ ತೆರಳಿ, ಅಲ್ಲಿ ಸಂಕಷ್ಟ ಸ್ಥಿತಿಯಲ್ಲಿರುವ ಮಂಗಳೂರಿನ 35 ಯುವಕರ ಗುಂಪು ಸಹಾಯಕ್ಕಾಗಿ ಮೊರೆ ಇಡುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕಳೆದ 4 ತಿಂಗಳ ಹಿಂದೆ ಕುವೈತ್ಗೆ ತೆರಳಿದ್ದು, ಸಂಬಳ ನೀಡಿಲ್ಲ. ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ ಎಂದು ವಿಡಿಯೋದಲ್ಲಿ ಯುವಕರು ಅಳಲು ತೋಡಿಕೊಂಡಿದ್ದಾರೆ.
ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಮಾಲೀಕ ಪ್ರಸಾದ್ ಶೆಟ್ಟಿ ಎಂಬವರಿಗೆ ರೂ 65,000 ನೀಡಿ ಜನವರಿ 7ರಂದು ಕುವೈತ್ಗೆ ಬಂದಿದ್ದೇವೆ. ಇಲ್ಲಿ ಬಂದ ಬಳಿಕ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಕೆಲ ತಿಂಗಳಿನಿಂದ ಸಂಬಳ ನೀಡಿಲ್ಲ. ಕೆಲಸದ ಸ್ಥಳದಲ್ಲಿ ಊಟದ ವ್ಯವಸ್ಥೆಯನ್ನೂ ರದ್ದುಗೊಳಿಸಿದ್ದಾರೆ. ಊಟಕ್ಕಾಗಿ ನಾವು ಬೇಡುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ್ದಾರೆ.
ಸಹಾಯ ಕೇಳಿ ಕುವೈತ್ನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸಂಪರ್ಕ ಮಾಡಿದೆವು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಈ ವಿಡಿಯೊವನ್ನು ಶಾಸಕ ವೇದವ್ಯಾಸ ಕಾಮತ್ ಅವರಿಗೆ ತಲುಪಿಸಿ. ನಮ್ಮ ನೆರವಿಗೆ ಬನ್ನಿ ಎಂದು ಅವರಲ್ಲಿ ಮನವಿ ಮಾಡುತ್ತೇವೆ. ಮಾಧ್ಯಮದವರು, ರಾಜಕಾರಣಿಗಳು ಮತ್ತು ಶಾಸಕರು ನಮ್ಮ ನೆರವಿಗೆ ಬನ್ನಿ. ದಯವಿಟ್ಟು ನಾವು ವಾಪಸು ಊರಿಗೆ ಬರಲು ನೆರವು ನೀಡಿ ಎಂದು ಇವರೆಲ್ಲರೂ ಬೇಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ವೇದವ್ಯಾಸ ಕಾಮತ್ ,ಮಂಗಳೂರಿನ 35 ಮಂದಿ ಕುವೈತ್ಗೆ ಉದ್ಯೋಗಕ್ಕೆಂದು ಹೋಗಿ ಸಂಕಷ್ಟದಲ್ಲಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ವಿಡಿಯೋ ವೀಕ್ಷಣೆ ಮಾಡಿದ್ದು, ಆ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಅವರ ವಿಳಾಸ ಪತ್ತೆಗೆ ಪ್ರಯತ್ನ ಮಾಡಲಾಗುತ್ತಿದ್ದು, ಅವರನ್ನು ಉದ್ಯೋಗಕ್ಕೆ ಕಳುಹಿಸಿದ ಸಂಸ್ಥೆಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.