ಬಂಟ್ವಾಳ, ಮೇ 18 (Daijiworld News/SM): ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಒಂದು ವಾರದೊಳಗೆ ಕರ್ನಾಟಕದ ಮೈತ್ರಿ ಸರಕಾರ ಪತನಗೊಂಡು ಬಿಎಸ್ ವೈ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಳಿಕ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಪಕ್ಷದ ಪ್ರಮುಖ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಈ ಹಿಂದೆ ಬಿಎಸ್ ವೈ ಅವರು ಮುಖ್ಯಮಂತ್ರಿಯಾಗಿದ್ದಾಗ ಗರಿಷ್ಠ ಮೊತ್ತದ ಅನುದಾನ ಜಿಲ್ಲೆಗೆ ಹರಿದು ಬಂದಿದೆ. ಕೇಂದ್ರ ಮತ್ತು ರಾಜ್ಯದಲ್ಲೂ ಒಂದೇ ಪಕ್ಷದ ಆಡಳಿತ ಬಂದಾಗ ಮತ್ತಷ್ಟು ಅನುದಾನವನ್ನು ತರಲು ಸಹಕಾರಿಯಾಗುವುದು ಎಂದರು.
ದೇಶದಲ್ಲಿ ವಂಶ ರಾಜಕಾರಣದ ಭೋಗ ಜೀವನಕ್ಕೆ ಅವಕಾಶವಿಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ತ್ಯಾಗ ಮತ್ತು ಸಂತ ಜೀವನಕ್ಕೆ ಜನತೆ ಮನ್ನಣೆ ನೀಡಿದ್ದಾರೆ ಎಂದು ನಳಿನ್ ಹೇಳಿದರು.