ಉಡುಪಿ, ಮೇ24(Daijiworld News/SS): ಕೇಂದ್ರ ಸರ್ಕಾರದ ಜನಪರ ಯೋಜನೆ, ಕ್ಷೇತ್ರದ ಜನತೆ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಮ್ಮ ವಿರುದ್ಧ ಮಿತ್ರಪಕ್ಷಗಳು ಒಟ್ಟಾಗಿ ಹೋರಾಟ ಮಾಡಿದ್ದಾರೆ. ಅವರ ಹೋರಾಟ ಕಡಿಮೆ ಇರಲಿಲ್ಲ. ನಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ನನ್ನ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ನನ್ನನ್ನು ಗೆಲ್ಲಿಸಿವೆ. ನಾನು ಅಧಿಕ ಮತಗಳ ಅಂತರದಿಂದ ಗೆಲ್ಲುವೆ ಎಂದು ಮೊದಲೇ ಹೇಳಿದ್ದೆ. ವಿಶ್ವಾಸವಿತ್ತು, ಮತದಾರರ ಆಶೀರ್ವಾದಿಂದ ಗೆಲುವು ನಮ್ಮದಾಗಿದೆ. ಇನ್ನು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕೆಲಸ ಎಂದು ಹೇಳಿದರು.
ಹಲವಾರು ಅಭಿವೃದ್ಧಿ ಕೆಲಸಗಳು, ಸಂಸ್ಥೆಗಳನ್ನು ತಂದಿದ್ದೇನೆ. ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಬೇಕಾದ ಕೆಲಸಗಳು ಆಗಬೇಕಿವೆ. ಎರಡು ಜಿಲ್ಲೆಗಳಲ್ಲಿ ಧಾರ್ಮಿಕ, ಪ್ರವಾಸಿ ಸ್ಥಳ ಸಂಪರ್ಕಿಸುವ, ಹಾದು ಹೋಗುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವುದು. ಕೊಂಕಣ ರೈಲ್ವೆ ದ್ವಿಪಥ ಮಾಡಬೇಕು ಎಂಬ ಹಲವು ವರ್ಷಗಳ ಬೇಡಿಕೆ ಇದೆ. ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಎರಡು ಜಿಲ್ಲೆಗಳಿಗೆ ಅನುಕೂಲವಾಗುವಂತಹ ಕೇಂದ್ರ ಸರ್ಕಾರದ ಪೂರಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.