ಉಡುಪಿ, ಮೇ 24 (Daijiworld News/SM): ಭಿನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕರಾವಳಿ ಜನತೆಯ ಮನೆ ಮಾತಾಗಿರುವ ದಾಯ್ಜಿವರ್ಲ್ಡ್ 24x7 ವಾಹಿನಿ ೫ ನೇ ವಸಂತಕ್ಕೆ ಹೆಜ್ಜೆಯನ್ನಿಡುತ್ತಿದೆ. ಐದರ ಸಂಭ್ರಮವ ಗರಿಗೆದರಿದ್ದು, ಮೇ 26ರ ಸಂಜೆ 5.30ರಿಂದ ಉಡುಪಿಯ ಪೂರ್ಣ ಪ್ರಜ್ಞ ಸಭಾಂಗಣದಲ್ಲಿ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭಗೊಂಡಿದೆ.
ಜೂನಿಯರ್ ಮಸ್ತಿ ಸ್ಪರ್ಧೆಯ ಹೆಸರು ಇಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದ್ದು, ಸಮಾರಂಭದಲ್ಲಿ ವಿಜೇತರ ಆಯ್ಕೆ ಹಾಗೂ ಪ್ರಶಸ್ತಿ ಪುರಸ್ಕಾರ ಕಾರ್ಯ ನಡೆಯಲಿದೆ. ಪ್ರತಿ ಬಾರಿ ಟಿವಿ ಪರದೆಯಲ್ಲಿ ಮಾತ್ರವೇ ವೀಕ್ಷಿಸುತ್ತಿದ್ದ ಕೊಂಕಣಿಯ ಅಪ್ರತಿಮ ರಿಯಾಲಿಟಿ ಶೋ ‘ಮ್ಹಜೊ ತಾಳೊ ಗಾಯ್ತಾಲೊ’ ಹಾಗೂ ‘ಮಿಸಸ್ ಮೀನಾ ಆಂಡ್ ಫ್ಯಾಮಿಲಿ’ ಧಾರಾವಾಹಿಯ ಕಲಾವಿದರು ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲಿದ್ದು, ಸಮಾರಂಭದ ಪ್ರಮುಖ ಆಕರ್ಷಣೆ ಎಣಿಸಿಕೊಳ್ಳಲಿದ್ದಾರೆ.
ಟಿವಿ ಪರದೆಯಲ್ಲಿ ಪುಟಾಣಿಗಳ ಕಲರವ ನೋಡುತ್ತಿದ್ದವರಿಗಂತೂ ಇದೊಂದು ಸುವರ್ಣಾವಕಾಶ. ಪುಟಾಣಿಗಳ ನೃತ್ಯ ಪ್ರದರ್ಶನವಂತೂ ಕಲಾಭಿಮಾನಿಗಳಿಗೆ ರಸದೌತನವಾಗಲಿದೆ. ಒಂದೇ ಸಮಾರಂಭದಲ್ಲಿ ಹಾಸ್ಯ, ಹಾಡು, ಕುಣಿತ ಮೂರನ್ನೂ ಸವಿಯುವ ಅಪ್ರತಿಮ ಅವಕಾಶಕ್ಕೆ ಪೂರ್ಣ ಪ್ರಜ್ಞ ಸಭಾಂಗಣ ವೇದಿಕೆಯಾಗಲಿದೆ. ಮನೋರಂಜನೆ ಹಾಗೂ ಮಾಧ್ಯಮ ಕ್ಷೇತ್ರದ ದಿಗ್ಗಜರು ಸಮಾರಂಭದಲ್ಲಿ ಸಮ್ಮಿಲನಗೊಳ್ಳಲಿದ್ದಾರೆ.
ಇನ್ನು ಕರಾವಳಿಯ ಮಾಧ್ಯಮದಲ್ಲಿ ಸುಪ್ರಸಿದ್ದಿಗಳಿಸಿರುವ ಕಾಮಿಡಿ ಕುಸಾಲ್, ಓಕೆ ವಿತ್ ಸಿಕೆ ಖ್ಯಾತಿಯ ಪ್ರಶಾಂತ್ ಸಿ.ಕೆ. ಅವರ ಹಾಸ್ಯ, ನಿರೂಪಕ ಚೇತನ್ ಕುಮಾರ್ ಶೆಟ್ಟಿ, ಶರ್ಮಿಲಾ ಅಮಿನ್ ಹಾಗೂ ಬಬಿತಾ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಜ್ಯೂನಿಯರ್ ಮಸ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪುಟಾಣಿಗಳ ಜತೆಗೆ ಪ್ರಸಿದ್ದ ಹಾಡುಗಾರರು, ನಿರ್ದೇಶಕರು, ನಿರ್ಮಾಪಕರುಗಳು ಸೇರಿದಂತೆ ಮಾಧ್ಯಮ, ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿನ ಸಾಧಕರೂ ಕೂಡ ಸಮಾರಂಭದ ಮೆರುಗನ್ನು ಹೆಚ್ಚಿಸಲಿದ್ದಾರೆ.
ಕಲಾ ಪ್ರಿಯರಿಗೆ ಸಮಾರಂಭದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಯಾವುದೇ ರೀತಿಯ ಪ್ರವೇಶ ಶುಲ್ಕವಿಲ್ಲ. ಮೊದಲು ಬಂದವರಿಗೆ ಮೊದಲ ಆದ್ಯತೆ.