ಬ್ರೆಜಿಲ್, ಮೇ 20 (Daijiworld News/MSP): ಬಂದೂಕುಧಾರಿಗಳ ಗುಂಪೊಂದು ಬಾರ್ ವೊಂದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿರುವ ಘಟನೆ ಉತ್ತರ ಬ್ರೆಜಿಲ್ ನ ಪಾರಾ ರಾಜ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮೂರು ಕಾರು ಹಾಗೂ ಒಂದು ಮೋಟರ್ ಸೈಕಲ್ ನಲ್ಲಿ ಬಾರ್ ಗೆ ಆಗಮಿಸಿದ ಏಳು ಮಂದಿ ಗನ್ ಮ್ಯಾನ್ ಗಳು ಬೆಲೆಮ್ ನಗರದಲ್ಲಿರುವ ಬಾರ್ ವೊಂದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದ ಪರಿಣಾಮ ಆರು ಮಹಿಳೆಯರು, ಐವರು ಪುರುಷರು ಸೇರಿ ಹನ್ನೊಂದು ಜನರು ಬಲಿಯಾಗಿದ್ದಾರೆಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಬಂದೂಕುದಾರಿಗಳು ದಾಳಿ ನಡೆಸಿ ಬಾರ್ ನಲ್ಲಿದ್ದ ಮೃತಪಟ್ಟವರ 11 ಮಂದಿಯ ತಲೆಗೆ ನೇರವಾಗಿ ಗುಂಡಿಕ್ಕಿದ ಕಾರಣ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕ ಭದ್ರತೆಯ ಕಾರ್ಯದರ್ಶಿ ಉಲೇಮ್ ಮಚಡೊ ವಿವರಿಸಿದ್ದಾರೆ.
ಘಟನೆಯಲ್ಲಿ ಓರ್ವ ಬಂದೂಕುದಾರಿ ಗಾಯಗೊಂಡಿದ್ದು, ಆತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಗನ್ ಮ್ಯಾನ್ ಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಗನ್ ಮ್ಯಾನ್ ನನ್ನು ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ. ಬಂದೂಕುದಾರಿಗಳ ದಾಳಿಯ ಉದ್ದೇಶ ಅಸ್ಪಷ್ಟವಾಗಿದೆ.