ವಾಷಿಂಗ್ಟನ್, ಮೇ 18(Daijiworld News/MSP): ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಪಡೆದ ವಿಶ್ವದ ಮುಂಗೋಪಿ ಮುಖದ ಬೆಕ್ಕು ಸಾವನ್ನಪ್ಪಿದೆ. ಮೂತ್ರದ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಇದರ ಮಾಲೀಕರು ತಿಳಿಸಿದ್ದಾರೆ. ಇಂಟರ್ನೆಟ್ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿ ಸಾಕಷ್ಟು ಫೇಮಸ್ ಆಗಿದ್ದ ಗ್ರಂಪಿ ಕ್ಯಾಟ್, ಏಳನೇ ವಯಸ್ಸಿಗೆ ಮೃತಪಟ್ಟಿದೆ. ಈ ಬೆಕ್ಕಿನ ನೈಜ ಹೆಸರು ಟಾರ್ಡರ್ ಸಾಸ್, ಇದು ಮಿಕ್ಸಿಡ್ ಬ್ರೀಡ್ ತಳಿಯ ಬೆಕ್ಕಾಗಿದೆ.
ವಿಶೇಷ ಎಂದರೆ ಇನ್ಸ್ಟಾಗ್ರಾಮ್ನಲ್ಲಿ ಈ ಬೆಕ್ಕು 24 ಲಕ್ಷ ಫಾಲೋವರ್ಗಳನ್ನು ಹೊಂದಿತ್ತು. ಅಷ್ಟೇ ಅಲ್ಲ, ಟಿವಿಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಹಾಗೂ ಸಿನಿಮಾದಲ್ಲಿ ಧಾರವಾಹಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿತ್ತು.
2012ರಲ್ಲಿ ಒಮ್ಮೆ ಈ ಬೆಕ್ಕಿನ ವಿಶಿಷ್ಟ ಭಂಗಿಯ ಫೋಟೋ ವೈರಲ್ ಆದಾಗಿನಿಂದ ಇದು ಸೆಲೆಬ್ರಿಟಿ ಸ್ಟೇಟಸ್ ಪಡೆದಿತ್ತು. ಯೂಟ್ಯೂಬ್ ವಿಡಿಯೋದಲ್ಲಿ 15.7 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಫೇಮಸ್ ಆಗಿತ್ತು. ಗ್ರಂಪಿ ಕ್ಯಾಟ್ ಹೆಸರಿನಲ್ಲಿ ಒಂದು ದೊಡ್ಡ ವ್ಯಾಪಾರವೇ ನಡೆಯುತ್ತಿದೆ. ಈ ಬೆಕ್ಕಿನ ಮುಖವನ್ನೇ ಹೋಲುವ ಕಾರ್ಟೂನ್ ಕ್ಯಾರೆಕ್ಟರ್ಗಳು, ಸ್ಟಿಕ್ಕರ್ಗಳೂ ಪ್ರಚಾರಕ್ಕೆ ಬಂದಿವೆ. ಈ ಬೆಕ್ಕಿನ ಮಾಲೀಕರು ಸ್ಥಾಪಿಸಿದ ಗ್ರಂಪಿ ಕ್ಯಾಟ್ ಸಂಸ್ಥೆಯ ಮೌಲ್ಯ 2014ರಲ್ಲೇ 680 ಕೋಟಿ ರೂಪಾಯಿ ದಾಟಿತ್ತು.