ಢಾಕಾ, ಜು.21(DaijiworldNews/AK):ಸರ್ಕಾರಿ ಉದ್ಯೋಗ ಕೋಟಾಗಳ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ. ಇದನ್ನು ನಿಯಂತ್ರಿಸಲು ಕಂಡಲ್ಲಿ ಗುಂಡು ಹಾರಿಸಲು ಬಾಂಗ್ಲಾದೇಶದಲ್ಲಿ ಆದೇಶಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಹಿಂಸಾಚಾರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಶೇ. 56ರಷ್ಟಿದ್ದ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ. 7ಕ್ಕೆ ಇಳಿಸಿದೆ.
ಆದರೆ ಪ್ರತಿಭಟನೆಗೆ ಕಾರಣವಾಗಿದ್ದ ಸ್ವಾತಂತ್ರ್ಯ ಯೋಧರ ಕುಟುಂಬದ ಮೀಸಲಾತಿಯನ್ನು ಕೋರ್ಟ್ ಕೈಬಿಟ್ಟಿಲ್ಲ. ಆದರೆ, ಅವರ ಮೀಸಲಾತಿ ಮುಂದುವರಿದಿದೆಯಾದರೂ ಪ್ರಮಾಣ ಮಾತ್ರ ತುಸು ತಗ್ಗಿದೆ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಸೀಮಿತಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ.
ಇಂದು ತೀರ್ಪು ಪ್ರಕಟಿಸಿದ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ, ಪ್ರತಿಭಟನೆಗಳನ್ನು ಕೈಬಿಟ್ಟು ತರಗತಿಗಳಿಗೆ ಮರಳುವಂತೆ ವಿದ್ಯಾರ್ಥಿಗಳಿಗೆ ಆದೇಶಿಸಿದೆ. ಆದರೆ, ಸ್ವಾತಂತ್ರ್ಯ ಯೋಧರ ಬಂಧುಗಳಿಗೆ ಮೀಸಲಾತಿ ಕೊಡುತ್ತಿರುವುದರ ವಿರುದ್ಧವೇ ನಡೆಯುತ್ತಿರುವ ಪ್ರತಿಭಟನೆ ಏನಾಗುತ್ತದೆಯೋ ನೋಡಬೇಕಿದೆ. ಈ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 151 ಇದೆ.