ವಾಷಿಂಗ್ಟನ್, ಮೇ15(Daijiworld News/SM): ಚಂದ್ರನ ಗಾತ್ರ ಕುಗ್ಗುತ್ತಾ ಸಾಗುತ್ತಿದ್ದು, ಇದರ ಪರಿಣಾಮವಾಗಿ ಚಂದಿರನ ಮೇಲ್ಮೈನಲ್ಲಿ ಸುಕ್ಕುಗಳೇಳುತ್ತಿವೆ. ಮಾತ್ರವಲ್ಲ, ಈ ಬದಲಾವಣೆಗಳಿಂದಾಗಿ ಚಂದ್ರನಲ್ಲಿ ಕಂಪನವೂ ಉಂಟಾಗುತ್ತಿದೆ ಎಂಬ ಮಾಹಿತಿಯನ್ನು ನಾಸಾ ವಿಜ್ಞಾನಿಗಳು ಚಿತ್ರ ಸಮೇತ ಬಯಲಿಗೆಳೆದಿದ್ದಾರೆ.
ಲೂನಾರ್ ರೆಕನ್ನೇಸ್ಸಾನ್ಸ್ ಆರ್ಬಿಟರ್ ತೆಗೆದಿರುವ 12 ಸಾವಿರಕ್ಕೂ ಅಧಿಕ ಫೋಟೋಗಳ ಅಧ್ಯಯನ ನಡೆಸಿ ಸಿದ್ಧಪಡಿಸಲಾಗಿರುವ ವರದಿ ಈಗ ಬಹಿರಂಗವಾಗಿದೆ.
ಚಂದ್ರನ ಒಳಭಾಗದಲ್ಲೂ ಕುಗ್ಗುವಿಕೆ ಪ್ರಕ್ರಿಯೆ ನಡೆದಿದ್ದು, ಈ ಕಾರಣದಿಂದ ಕಂಪನ ಕಂಡುಬರುತ್ತಿದೆ. ಹೀಗಾಗಿ ಕಳೆದ ನೂರಾರು ಮಿಲಿಯನ್ ವರ್ಷಗಳಲ್ಲಿ ಚಂದ್ರನ ಮೇಲ್ಮೈ ಅಂದಾಜು 150 ಅಡಿಗಳಷ್ಟು ಕುಗ್ಗಿದೆ ಎಂದು ಹೇಳಲಾಗುತ್ತಿದೆ.
ಚಂದ್ರನಲ್ಲಿ ಭೂಮಿಯಲ್ಲಿರುವಂತೆ ಟೆಕ್ಟಾನಿಕ್ ಪ್ಲೇಟ್ ಗಳಿಲ್ಲ. ಆದರೂ ಚಂದ್ರನಲ್ಲಿನ ಉಷ್ಣಾಂಶ ಇಳಿಕೆಯಿಂದ ಟೆಕ್ಟಾನಿಕ್ ಚಟುವಟಿಕೆಗಳು ಕಂಡುಬಂದಿವೆ. ಈ ಕಾರಣದಿಂದಲೇ ಚಂದ್ರನ ಮೇಲ್ಮೈನಲ್ಲಿ ಸುಕ್ಕುಗಳಾಗುತ್ತಿವೆ. ಈ ವಿದ್ಯಮಾನವನ್ನು ವಿಜ್ಞಾನಿಗಳು ದ್ರಾಕ್ಷಿಹಣ್ಣು ಒಣದ್ರಾಕ್ಷಿಯಾಗುವ ಪ್ರಕ್ರಿಯೆಗೆ ಸಂಶೋಧಕರು ಹೋಲಿಸಿದ್ದಾರೆ.
ಅಪೊಲೊ ಮಿಷನ್ನ ಖಗೋಳ ವಿಜ್ಞಾನಿಗಳು ಚಂದ್ರನ ಮೆಲ್ಮೈನ ಮೇಲೆ ಇರಿಸಿರುವ ನಾಲ್ಕು ಕಂಪನ ಮಾಪಕಗಳ ಮೂಲಕ ‘ಚಂದ್ರ ಕಂಪನ’ದ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಈ ಕಂಪನಗಳನ್ನು ಅಳೆಯಲಾಗಿ ‘ಚಂದ್ರ ಕಂಪನ’ ಸಂಬಂಧಿತ ವಿಸ್ತೃತ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಈ ಮಾಪಕಗಳು ಚಂದ್ರನೊಳಗೆ ಉಂಟಾದ ಒಟ್ಟು 28 ಕಂಪನಗಳನ್ನು ದಾಖಲಿಸಿವೆ. ಇವುಗಳ ತೀವ್ರತೆ ರಿಕ್ಟರ್ ಮಾಪಕದಲ್ಲಿ 2ರಿಂದ 5ರವರೆಗೆ ಇತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.