ಕೊಲಂಬೊ, ಮೇ 14 (Daijiworld News/MSP): ಈಸ್ಟರ್ ಭಾನುವಾರದ ಉಗ್ರ ದಾಳಿ ನಂತರ ಶ್ರೀಲಂಕಾದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ಬೆನ್ನಲ್ಲೇ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಲಂಕಾದಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದೆ. ಹಿಂಸಾಚಾರಕ್ಕೆ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಶ್ರೀಲಂಕಾದಲ್ಲಿ ಮುಸ್ಲಿಮ್ ಸಮುದಾಯದ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದ್ದು, ಮುಸ್ಲಿಮರ ಒಡೆತನದ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಲಾಗುತ್ತಿದೆ.
ಫೇಸ್ ಬುಕ್ ಪೋಸ್ಟ್ ನಿದ ಸಿಟ್ಟಿಗೆದ್ದ ಶ್ರೀಲಂಕಾ ಮೂಲ ನಿವಾಸಿಗಳು ಮಸೀದಿ ಹಾಗೂ ಮುಸ್ಲಿಂ ಮಾಲೀಕತ್ವದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. " ತುಂಬಾ ನಗಬೇಡಿ ಒಂದು ದಿನ ನೀವು ಅಳಬೇಕಾಗುತ್ತದೆ" ಎಂಬ ಫೇಸ್ ಬುಕ್ ಪೋಸ್ಟ್ ನ್ನು ಸ್ಥಳೀಯ ಕ್ರಿಶ್ಚಿಯನ್ನರು ಬೆದರಿಕೆ ಎಂದು ಭಾವಿಸಿ ಮುಸ್ಲಿಂ ಮಾಲೀಕತ್ವದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲು ಆರಂಭಿಸಿದರು.
ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಲಂಕಾ ಸರ್ಕಾರ ಫೇಸ್ಬುಕ್, ವಾಟ್ಸ್ಆ್ಯಪ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ತಾತ್ಕಲಿಕವಾಗಿ ನಿಷೇಧಿಸಿದೆ. ಪ್ರಮುಖವಾಗಿ ಮುಸ್ಲಿಂ ಜನರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ಕರ್ಫ್ಯೂ ಹೇರಲಾಗಿದೆ. ಕೋಮು ಹಿಂಸಾಚಾರವನ್ನು ಸೃಷ್ಟಿಸಿ ದೇಶವನ್ನು ಅಸ್ಥಿರತೆಯತ್ತ ಕೊಂಡೊಯ್ಯಲು ಕೆಲವು ಅನಾಮಧೇಯ ಗುಂಪುಗಳು ಪ್ರಯತ್ನಿಸುತ್ತಿವೆ. ಅವುಗಳನ್ನು ತಡೆಯಲು ಕರ್ಫ್ಯೂ ಘೋಷಿಸಿರುವುದಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.