ವಾಷಿಂಗ್ಟನ್, ಜೂ. 12(DaijiworldNews/AA): ಅಕ್ರಮ ಗನ್ ಖರೀದಿಗೆ ಸಂಬಂಧಿಸಿದ ಕ್ರಿಮಿನಲ್ ಕೇಸ್ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್ ಬೈಡನ್ (54) ತಪ್ಪಿತಸ್ಥನೆಂದು ಡೆಲವೇರ್ನ ವಿಲ್ಡಿಂಗ್ಟನ್ ಕೋರ್ಟ್ ಘೋಷಣೆ ಮಾಡಿದೆ.
2018ರಲ್ಲಿ ಅಕ್ರಮವಾಗಿ ಗನ್ ಖರೀದಿ ಮತ್ತು ಮಾದಕ ವಸ್ತು ಸೇವಿಸಿದ ಸಂದರ್ಭದಲ್ಲಿ ಗನ್ ಇಟ್ಟುಕೊಂಡಿದ್ದ ಆರೋಪ ಹಂಟರ್ ಬೈಡನ್ ಮೇಲಿತ್ತು. ಇದೀಗ ಈ ಆರೋಪಗಳೆಲ್ಲವೂ ಕೋರ್ಟ್ ನಲ್ಲಿ ಸಾಬೀತಾಗಿದ್ದು, ಹಂಟರ್ ಬೈಡನ್ ತಪ್ಪಿತಸ್ಥನೆಂದು ಘೋಷಿಸಲಾಗಿದೆ. ಹಂಟರ್ ಮೇಲಿನ ಈ ಎರಡೂ ಆರೋಪಗಳು ಅಮೆರಿಕದ ಫೆಡರಲ್ ಕಾನೂನಿನ ಉಲ್ಲಂಘನೆಯಾಗಿವೆ.
ಈ ಬಗ್ಗೆ ಸತತ 7 ದಿನಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಆ ಬಳಿಕವೇ ಹಂಟರ್ ಬೈಡನ್ ಅವರನ್ನು ತಪ್ಪಿತಸ್ಥ ಎಂದು ಸಾಬೀತಾಗಿದೆ. ಇನ್ನು ಪ್ರಕರಣ ಸಂಬಂಧ ಹಂಟರ್ ಅವರ ಶಿಕ್ಷೆ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದ್ದು, ಗರಿಷ್ಠ ಎಂದರೆ 25 ವರ್ಷ ಜೈಲು ಶಿಕ್ಷೆಯಾಗಬಹುದು ಎನ್ನಲಾಗಿದೆ.
ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರ ಪುತ್ರ ಕ್ರಿಮಿನಲ್ ಕೇಸ್ನಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವುದು ಇದೇ ಮೊದಲ ಬಾರಿಯಾಗಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹಂಟರ್ ಬೈಡನ್ ಅವರು ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ಸಹೋದರ ಬಿಯೊ ಸಾವಿನ ನಂತರ ಮಾದಕ ವ್ಯಸನಿಯಾಗಿದ್ದ ಹಂಟರ್ ಇದೀಗ ಕ್ರಿಮಿನಲ್ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಈ ಘಟನೆಯು ಅಮೆರಿಕದಲ್ಲಿ ಮುಂಬರಲಿರುವ ಅಧ್ಯಕ್ಷೀಯ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.