ದುಬೈ, ಮೇ09(Daijiworld News/SS): ಭಾರತೀಯ ಮೂಲದ ಕ್ರೈಸ್ತ ಸಮುದಾಯಕ್ಕೆ ಸೇರಿದ ಉದ್ಯಮಿಯೊಬ್ಬರು ಮುಸ್ಲಿಂ ನೌಕರರ ಪ್ರಾರ್ಥನೆಗೆಂದು ಯುಎಇಯಲ್ಲಿ ಮಸೀದಿ ಕಟ್ಟಿಸಿಕೊಟ್ಟಿದ್ದು ಮಾತ್ರವಲ್ಲದೆ, ಈ ಬಾರಿ ರಂಜಾನ್ ಸಂದರ್ಭ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಏರ್ಪಡಿಸಿದ್ದಾರೆ.
ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಪ್ರಾರ್ಥನೆಗೆ ಅನುಕೂಲವಾಗಲೆಂದು ಯುಎಇಯಲ್ಲಿ ಉದ್ಯಮ ನಡೆಸುತ್ತಿರುವ ಭಾರತೀಯ ಮೂಲದ ಉದ್ಯಮಿ ಸಜಿ ಚೆರಿಯನ್ ನೌಕರರ ಪ್ರಾರ್ಥನೆಗೆಂದು ವರುಷಗಳ ಹಿಂದೆ ಮಸೀದಿ ನಿರ್ಮಿಸಿದ್ದರು. 49 ವರ್ಷದ ಸಜಿ ಚೆರಿಯನ್ ಕಾರ್ಯಕ್ಕೆ ಈ ಹಿಂದೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಬಾರಿ ಮತ್ತೆ ಮುಸ್ಲಿಮರಿಗೆ ಇಪ್ತಾರ್ ನಡೆಸುವುದಾಗಿ ತಿಳಿಸಿದ್ದಾರೆ.
2003ರಲ್ಲಿ ಯುಎಇಗೆ ತೆರಳಿದ್ದ ಕೇರಳದ ಕಯಾಮುಕುಲಂ ಸಜಿ ಚೆರಿಯನ್ ಕೋಟ್ಯಂತರ ರೂ. ಮೌಲ್ಯದ ಉದ್ಯಮ ಮುನ್ನಡೆಸುತ್ತಿದ್ದು, ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ನಿಂತಿದ್ದಾರೆ. ಅಲ್ ಹಯಾಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಪ್ರಾರ್ಥನೆಗೆಂದು ಮಸೀದಿ ಇರುವ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿದ್ದರು. ಈ ಹಿನ್ನಲೆಯಲ್ಲಿ ಸಜಿ ಚೆರಿಯನ್ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಸೀದಿ ನಿರ್ಮಿಸಲು ತೀರ್ಮಾನಿಸಿದ್ದರು.
ಕ್ರೈಸ್ತರಾಗಿರುವ ಚೆರಿಯನ್ ಕಾರ್ಯಕ್ಕೆ ಕೈಜೋಡಿಲು ಸ್ಥಳೀಯಾಡಳಿತವೂ ಮುಂದಾಗಿತ್ತು. ಆದರೆ, ಇದೆಲ್ಲವನ್ನೂ ನಯವಾಗಿ ನಿರಾಕರಿಸಿದ ಸಜಿ ಚೆರಿಯನ್, ತಮ್ಮ ಸ್ವಂತ ಹಣದಿಂದಲೇ ಮಸೀದಿ ನಿರ್ಮಾಣ ಕಾರ್ಯ ಪೂರೈಸಿದ್ದರು.
ಇದೀಗ ಈ ಬಾರಿ ಸಜಿ ಚೆರಿಯನ್ ಇಫ್ತಾರ್ ಕೂಟ ಆಯೋಜಿಸಿದ್ದು, ಧರ್ಮಗಳ ನಡುವಿನ ಸೌಹರ್ದತೆಗೆ ಸಾಕ್ಷಿಯಾಗಿದ್ದಾರೆ.