ಲಾಹೋರ್, ಮೇ 08 (Daijiworld News/MSP): ಪಾಕಿಸ್ತಾನದ ಲಾಹೋರ್ ನಲ್ಲಿ ಬುಧವಾರ ಬಾಂಬ್ ಸ್ಫೋಟ ಸಂಭವಿಸಿದ್ದು ಪರಿಣಾಮ ಐವರು ಸಾವನ್ನಪ್ಪಿದ್ದು 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾಹೋರ್ ನ ಖ್ಯಾತ ಪ್ರವಾಸಿ ತಾಣ ಡಾತಾ ದರ್ಬಾರ್ ಸೂಫಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಉಗ್ರರು ಅಟ್ಟಹಾಸ ಮೆರೆದಿದ್ದು, ಬಾಂಬ್ ಸ್ಫೋಟಿಸಿದ್ದಾರೆ.
ಪವಿತ್ರ ಮಾಸ ರಂಜಾನ್ ನ ಉಪವಾಸ ಆರಂಭವಾದ ಮರುದಿನವೇ ಉಗ್ರರು ಕೌರ್ಯ ಮೆರೆದಿದ್ದಾರೆ. ಬಾಂಬ್ ಸ್ಫೋಟದ ತೀವ್ರತೆಗೆ ಮಸೀದಿಯೊಳಗಿದ್ದ ಪೀಠೋಪಕರಣ ಹಾಗೂ ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಮಸೀದಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಗಳೂ ಕೂಡ ನುಚ್ಚುನೂರಾಗಿದೆ.
ನೂರಾರು ಮಂದಿ ಸೇರಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭ ಸ್ಫೋಟ ಸಂಭವಿಸಿದೆ ಎಂದು ಲಾಹೋರ್ ಪೊಲೀಸ್ ಆಯುಕ್ತ ಘಝಂಫರ್ ಅಲಿ ಅವರು ಮಾಹಿತಿ ನೀಡಿದ್ದಾರೆ.
ಇದೇ ದರ್ಗಾವನ್ನು ಗುರಿಯಾಗಿರಿಸಿಕೊಂಡು 2010 ರಲ್ಲಿ ದಾಳಿ ನಡೆಸಲಾಗಿತ್ತು, 40 ಮಂದಿ ಸಾವನ್ನಪ್ಪಿದ್ದರು.