ಇರಾನ್, ಏ.18(DaijiworldNews/AK): ಇಸ್ರೇಲ್ಗೆ ಸಂಬಂಧಿಸಿದ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿಗಳಿದ್ದರು, ಅವರನ್ನು ವಶಕ್ಕೆ ಪಡೆದು ಇರಾನ್ ಬಂಧಿಸಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಇರಾನ್ ನಾವು ಭಾರತೀಯರನ್ನು ಬಂಧಿಸಿಲ್ಲ. ಇಲ್ಲಿ ಹವಾಮಾನ ಸರಿ ಇಲ್ಲ ಅದಕ್ಕಾಗಿ ಅವರನ್ನು ಇಲ್ಲಿ ಇರಿಸಲಾಗಿದೆ. ಖಂಡಿತ ಅವರು ಬಯಸಿದಾಗ ಭಾರತಕ್ಕೆ ಹೋಗಬಹುದು ಎಂದು ಇರಾನ್ ರಾಯಭಾರಿ ಇರಾಜ್ ಇಲಾಹಿ ಹೇಳಿದ್ದಾರೆ.
ಇದೀಗ ಈ ಹೇಳಿಕೆ ಭಾರತ ರಾಜತಾಂತ್ರಿಕತೆಗೆ ಸಿಕ್ಕ ವಿಜಯ ಎಂದು ಹೇಳಲಾಗಿದೆ. ಇರಾನ್ ರಾಯಭಾರಿ ಪ್ರಕಾರ, ಪರ್ಷಿಯನ್ ಕೊಲ್ಲಿಯಲ್ಲಿ ಹವಾಮಾನ ಪರಿಸ್ಥಿತಿ ಉತ್ತಮವಾಗಿಲ್ಲ, ಆ ಕಾರಣದಿಂದ 17 ಭಾರತೀಯ ಸಿಬ್ಬಂದಿಗಳು ಇಲ್ಲಿದ್ದಾರೆ. ಹವಾಮಾನ ಸುಧಾರಿಸಿದ ಬಳಿಕ ಅವರು ಭಾರತಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.
ಭಾರತಕ್ಕೆ ಹೋಗಲು ಅವರು ಹಡಗನ್ನು ಬಳಸಬಹುದು ಎಂದು ಹೇಳಲಾಗಿದೆ. ಹಡಗಿನಲ್ಲಿರುವ ರಷ್ಯಾ, ಪಾಕಿಸ್ತಾನ ಮತ್ತು ಫಿಲಿಪೈನ್ಸ್ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಇರಾನ್ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು 17 ಜನ ಭಾರತೀಯ ಸಿಬ್ಬಂದಿಗಳನ್ನು ಭಾರತ ಸರ್ಕಾರಿ ಅಧಿಕಾರಿಗಳು ಭೇಟಿಯಾಗಲು ಅವಕಾಶ ನೀಡಬೇಕು ಹಾಗೂ ಅವರನ್ನು ಬಿಡುಗಡೆ ಮಾಡಬೇಕು ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರಿಗೆ ಫೋನ್ ಕರೆ ಮೂಲಕ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್, ಈಗಾಗಗಲೇ ನಾವು ವಶಪಡಿಸಿಕೊಂಡಿರುವ ಹಡಗಿನ ಎಲ್ಲ ಮಾಹಿತಿಯನ್ನು ಪಡೆಯುತ್ತಿದ್ದೇವೆ. ನಿಮ್ಮ ಅಧಿಕಾರಿಗಳು ಹಡಗಿನಲ್ಲಿದ್ದ 17 ಭಾರತೀಯರನ್ನು ಭೇಟಿಯಾಗಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಅವರನ್ನು ಬಂಧಿಸಿಲ್ಲ, ಮರಳಿ ಭಾರತಕ್ಕೆ ಕಳುಹಿಸಲಾಗುವುದು ಎಂದು ಇರಾನ್ ಹೇಳಿದೆ.