ಇಸ್ಲಾಮಾಬಾದ್, ಏ.18(DaijiworldNews/AK): ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸಂಸ್ಥಾಪಕ ಮತ್ತು ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ತಮ್ಮ ಪತ್ನಿ ಬುಶ್ರಾ ಬೀಬಿ ಜೈಲುವಾಸಕ್ಕೆ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಪತಿಯೊಂದಿಗಿನ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬುಶ್ರಾ ಬೀಬಿಯೂ ಶಿಕ್ಷೆಗೊಳಗಾಗಿದ್ದು ಪ್ರಸ್ತುತ ಇಸ್ಲಾಮಾಬಾದ್ನ ಉಪನಗರದಲ್ಲಿರುವ ಅವರ ಬನಿ ಗಾಲಾ ನಿವಾಸದಲ್ಲಿ ಬಂಧನದಲ್ಲಿದ್ದಾರೆ.
ಇಮ್ರಾನ್ ಖಾನ್ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಸುಧೀರ್ಘವಾದ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಲಾಗಿದ್ದು ಪ್ರಸ್ತುತ ಸೆರೆವಾಸದಲ್ಲಿರುವ ಇಮ್ರಾನ್ ಖಾನ್ ಅಡಿಯಾಲಾ ಜೈಲಿನಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಸೇನಾ ಮುಖ್ಯಸ್ಥರ ಮೇಲೆ ಆರೋಪಗಳನ್ನು ಮಾಡಿದ್ದಾರೆ.
ನನ್ನ ಪತ್ನಿಗೆ ನೀಡಲಾದ ಶಿಕ್ಷೆಯಲ್ಲಿ ಜನರಲ್ ಅಸಿಮ್ ಮುನೀರ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಖಾನ್ ಹೇಳಿದರು, ಅಲ್ಲದೆ ಆಕೆಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆ ಅಸಿಮ್ ಮುನೀರ್ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಹೆಂಡತಿಗೆ ಏನಾದರೂ ಆಗಿದ್ದರೆ ನಾನು ಅಸೀಂ ಮುನೀರ್ನನ್ನು ಬಿಡುವುದಿಲ್ಲ, ನಾನು ಬದುಕಿರುವವರೆಗೂ ಅಸೀಂ ಮುನೀರ್ನನ್ನು ಬಿಡುವುದಿಲ್ಲ, ಅವರ ಸಂವಿಧಾನ ವಿರೋಧಿ ಮತ್ತು ಕಾನೂನುಬಾಹಿರ ಕ್ರಮಗಳನ್ನು ಬಹಿರಂಗಪಡಿಸುತ್ತೇನೆ,’ ಎಂದು ಬೆದರಿಕೆ ಹಾಕಿದ್ದಾರೆ.