ಕೊಲಂಬೋ, ಮೇ 04 (Daijiworld News/MSP): ಈಸ್ಟರ್ ಭಾನುವಾರದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದಾಳಿ ನಡೆಸಿ 253 ಮಂದಿಯ ಸಾವಿಗೆ ಕಾರಣರಾಗಿದ್ದ ಆತ್ಮಾಹುತಿ ದಳದ ಉಗ್ರರು ಭಯೋತ್ಪಾದನೆ ಚಟುವಟಿಕೆಗಳ ತರಬೇತಿಗಾಗಿ ಕಾಶ್ಮೀರ, ಕೇರಳ ಮತ್ತು ಬೆಂಗಳೂರಿಗೆ ಭೇಟಿ ನೀಡಿದ್ದರು ಎಂಬ ಅಘಾತಕಾರಿ ವಿಚಾರವನ್ನು ಶ್ರೀಲಂಕಾ ಸೇನಾ ಪಡೆ ಮುಖ್ಯಸ್ಥರು ಬಹಿರಂಗಪಡಿಸಿದ್ದಾರೆ.
ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಸೇನಾ ಮುಖ್ಯಸ್ಥ ಲೆ| ಜ| ಮಹೇಶ್ ಸೇನನಾಯಕ ಈ ವಿಚಾರ ತಿಳಿಸಿದ್ದು, ಭಾರತ ಭೇಟಿಯ ನಿಖರ ಕಾರಣ ತಿಳಿಯದಿದ್ದರೂ, ಇವರು ಭಯೋತ್ಪಾದನಾ ಸಂಘಟನೆಯೊಂದಿಗೆ ನಂಟು ಹೊಂದಿರುವುದು ಖಚಿತವಾಗಿದೆ ಎಂದಿದ್ದಾರೆ.
ಇದಕ್ಕೆ ಪೂರಕ ಎಂಬಂತೆ ಐಸಿಸ್ ಜತೆ ಸಂಪರ್ಕವಿರುವ ಹಲವು ಶಂಕಿತ ಉಗ್ರರನ್ನು ಇತ್ತೀಚೆಗೆ ತಾನೆ ಭಾರತದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಮಿಳುನಾಡು ಮತ್ತು ಕೇರಳದಲ್ಲಿ ಬಂಧಿಸಿತ್ತು.
ಕಳೆದ ಎಪ್ರಿಲ್ 21ರಂದು ಇಸ್ಲಾಮಿಕ್ ಆತ್ಮಾಹುತಿ ದಾಳಿಕೋರರು ಕೊಲಂಬೋದಲ್ಲಿನ ಮೂರು ಚರ್ಚುಗಳು ಮತ್ತು ಮೂರು ವಿಲಾಸಿ ಹೊಟೇಲುಗಳ ಮೇಲೆ ಬಾಂಬ್ ದಾಳಿ ನಡೆಸಿ 253 ಮಂದಿಯನ್ನು ಬಲಿ ಪಡೆದು 500ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು.