ಬಹ್ರೇನ್, ಏ. 16(DaijiworldNews/AA): "ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ"ಯ (ಕೆಎನ್ ಆರ್ಐ) ನೂತನ ಆಡಳಿತ ಸಮಿತಿ ಕರ್ನಾಟಕ ಸರಕಾರದ ಅಧೀನದ ಸಂಸ್ಥೆ "ಅನಿವಾಸಿ ಭಾರತೀಯರ ವೇದಿಕೆಯ" (ಎನ್ ಆರ್ ಐ ಫೋರಂ ಕರ್ನಾಟಕ) ನೋಂದಾವಣೆಯೊಂದಿಗೆ ಬಹ್ರೇನ್ ನಲ್ಲಿ ಭಾನುವಾರ ಅಸ್ತಿತ್ವಕ್ಕೆ ಬಂದಿದೆ.
ಅಧ್ಯಕ್ಷರಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜ್ ಕುಮಾರ್ ಭಾಸ್ಕರ್, ಉಪಾಧ್ಯಕ್ಷರಾಗಿ ವಿಜಯ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ರೋಶನ್ ಲೂಯಿಸ್, ಖಜಾಂಚಿಯಾಗಿ ಮಂಗೇಶ ದೇಸಾಯಿ, ಸಹಾಯಕ. ಕಾರ್ಯದರ್ಶಿಯಾಗಿ ಜಮಾಲುದ್ದೀನ್ ವಿಟ್ಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಲ್ಲಿಕಾರ್ಜುನ್ ಪಾಟೀಲ್, ರಾಘವೇಂದ್ರ ಪ್ರಸಾದ್, ಗಣೇಶ್ ಮಾಣಿಲ,ಇವರುಗಳು ಆಯ್ಕೆಯಾಗಿದ್ದಾರೆ. ಹಿರಿಯ ಸಲಹೆಗಾರರಾಗಿ ಉದ್ಯಮಿ ಹಾಗೂ ಬಹರೈನ್ ಕ್ರಿಕೆಟ್ ಫೆಡರೇಷನ್ ನ ಸಲಹಾ ಸಮಿತಿಯ ಅಧ್ಯಕ್ಷರಾದ ಮಹಮ್ಮದ್ ಮನ್ಸೂರ್, ಕನ್ನಡ ಸಂಘದ ಮಾಜಿ ಅಧ್ಯಕ್ಷರುಗಳಾದ ಆಸ್ಟಿನ್ ಸಂತೋಷ್ ಹಾಗೂ ರಾಜೇಶ್ ಶೆಟ್ಟಿ ಯವರು ನಿಯುಕ್ತಿಗೊಂಡಿದ್ದಾರೆ.
ಸಮಿತಿಯು ಬಹರೈನ್ ನ ರಾಯಭಾರಿಗಳಾದ ಗೌರವಾನ್ವಿತ ವಿನೋದ್ ಕೆ. ಜೇಕಬ್ ರವರನ್ನು ಭೇಟಿಯಾಗಿ ಕರ್ನಾಟಕ ಸರಕಾರದ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿತು.
ಅನಿವಾಸಿ ಕನ್ನಡಿಗ ವೇದಿಕೆಯ ನಿಯೋಗವನ್ನು ಭೇಟಿಯಾದ ರಾಯಭಾರಿಗಳು, ಬಹರೈನ್ ನಲ್ಲಿ ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ ಕನ್ನಡಿಗರು ಸಮಿತಿಯಲ್ಲಿ ಗುರುತಿಸಿಕೊಂಡ ಬಗ್ಗೆ ತಿಳಿದುನ ಹರ್ಷ ವ್ಯಕ್ತ ಪಡಿಸಿ, ರಾಯಭಾರಿ ಕಚೇರಿಯಿಂದ ಸಾಧ್ಯವಾದ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು.