ಬ್ಯಾಂಕಾಕ್, ಮೇ02(Daijiworld News/SS): 66 ವರ್ಷದ ಥೈಲ್ಯಾಂಡ್ ರಾಜ ತಮ್ಮ ಅಂಗರಕ್ಷಕಿಯನ್ನು ಮದುವೆಯಾಗಿರುವ ಅಚ್ಚರಿಯ ಘಟನೆಯೊಂದು ವರದಿಯಾಗಿದೆ.
ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ಕಾರ್ನ್ ತಮ್ಮ ಅಂಗರಕ್ಷಕಿ ಸುಥಿದಾ ಅವರನ್ನು ವರಿಸಿಕೊಂಡಿದ್ದಾರೆ. ಸುಥಿದಾಗೆ ಪವಿತ್ರ ನೀರನ್ನು ಸಿಂಪಡಿಸುವ ಮೂಲಕ ಅವರನ್ನು ರಾಣಿಯಾಗಿ ಸ್ವೀಕರಿಸಿದರು.
ಅಂಗರಕ್ಷಕಿಯಾಗಿದ್ದ ಸುಥಿದಾ ಇದೀಗ ಥೈಲ್ಯಾಂಡ್ನ ರಾಣಿಯಾಗಿದ್ದಾರೆ. 66 ವರ್ಷದ ಮಹಾರಾಜ ವಜಿರಲೊಂಗ್ಕಾರ್ನ್ ಈಗಾಗಲೇ ಮೂರು ಮದುವೆಯಾಗಿದ್ದು, ಅವರೆಲ್ಲರಿಗೂ ವಿಚ್ಛೇದನೆ ನೀಡಿದ್ದಾರೆ.
2014ರಲ್ಲಿ ಮಹಾರಾಜ ವಜಿರಲೊಂಗ್ಕಾರ್ನ್ ತಮ್ಮ ಅಂಗರಕ್ಷಕಿಯಾಗಿ ಸುಥಿದಾ ಅವರನ್ನು ನೇಮಕ ಮಾಡಿಕೊಂಡಿದ್ದರು. ಇದೀಗ ತಮ್ಮ ಅಂಗರಕ್ಷಕಿಯನ್ನೇ ವರಿಸಿ ಆಕೆಗೆ ರಾಣಿ ಪಟ್ಟ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
2016ರಲ್ಲಿ ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ ಸಾವನ್ನಪ್ಪಿದ್ದರು. ತಂದೆಯ ಸಾವಿನ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.