ಒಟ್ಟಾವಾ, ಏ. 14(DaijiworldNews/AK):ಭಾರತ ಮೂಲದ ವಿದ್ಯಾರ್ಥಿಯನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆಗೈದ ಘಟನೆ ಕೆನಾಡಾದ ದಕ್ಷಿಣ ವ್ಯಾಂಕೋವರ್ನಲ್ಲಿ ನಡೆದಿದೆ.
ಚಿರಾಗ್ ಆಂಟಿಲ್ (24) ಹತ್ಯೆಯಾದ ವಿದ್ಯಾರ್ಥಿ. ಗುಂಡಿನ ಸದ್ದು ಕೇಳುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಚಿರಾಗ್ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ತನಿಖೆ ಮುಂದುವರಿದಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಚಿರಾಗ್ ಸಹೋದರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ ಫೋನಿನಲ್ಲಿ ಮಾತನಾಡುವಾಗ ಖುಷಿಯಾಗಿಯೇ ಇದ್ದ. ಬಳಿಕ ಎಲ್ಲೋ ಹೋಗಬೇಕೆಂದು ತನ್ನ ಆಡಿ ಕಾರನ್ನು ಹೊರಗೆ ತೆಗೆದ ವೇಳೆ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ವಿದ್ಯಾರ್ಥಿ ಘಟಕದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮುಖ್ಯಸ್ಥ ವರುಣ್ ಚೌಧರಿ ಅವರು ಎಕ್ಸ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಟ್ಯಾಗ್ ಮಾಡಿ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಪೋಷಕರು ಹರಿಯಾಣದ ಸೋನಿಪತ್ನಲ್ಲಿ ವಾಸಿಸುತ್ತಿದ್ದಾರೆ. ಕ ಹತ್ಯೆಗೀಡಾದ ಭಾರತೀಯ ವಿದ್ಯಾರ್ಥಿಯ ಪೋಷಕರು ತಮ್ಮ ಮಗನ ಶವವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.