ಬೆಲ್ಜಿಯಂ, ಮೇ 02 (Daijiworld News/MSP): ಪಾಕಿಸ್ತಾನ ಅಲ್ಪಸಂಖ್ಯಾತರ ಮೇಲೆ ತೋರುತ್ತಿರುವ ತಾರತಮ್ಯ ನಿಲ್ಲಿಸದೇ ಹೋದರೆ ಯುರೋಪ್ ಒಕ್ಕೂಟದಿಂದ ಪಾಕಿಸ್ತಾನಕ್ಕೆ ಪ್ರಸ್ತುತ ನೀಡಲಾಗುತ್ತಿರುವ ಎಲ್ಲಾ ರೀತಿಯ ಸಬ್ಸಿಡಿಗಳನ್ನು, ವ್ಯಾಪಾರ ವಾಣಿಜ್ಯ ಆದ್ಯತೆಗಳನ್ನು ರದ್ದು ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಯುರೋಪ್ ಒಕ್ಕೂಟ ನೀಡಿದೆ ಮಾತ್ರವಲ್ಲದೆ ಪಾಕಿಸ್ತಾನದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.
ಇಸ್ಲಾಮಿಕ್ ರಾಷ್ಟ್ರ ಪಾಕ್ ನಲ್ಲಿ ವಾಸಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆಯು ಗಮನಿಸಿದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎನ್ನುವುದನ್ನು ನಿಮಗೆ ನಾವು ಮನನ ಮಾಡಿಕೊಡುತ್ತಿದ್ದೇವೆ. ಅಲ್ಪಸಂಖ್ಯಾತರ ಮೇಲೆ ಪಾಕ್ ನೆಲದಲ್ಲಿ ನಡೆಯುತ್ತಿರುವ ಧರ್ಮನಿಂದನೆ ದಾಳಿ ತಾರತಮ್ಯ ದೌರ್ಜನ್ಯ ತಕ್ಷಣ ನಿಲ್ಲಿಸದಿದ್ದರೆ ಪಾಕ್ ಸಬ್ಸಿಡಿ ಮತ್ತು ವ್ಯಾಪಾರ ಸಂಬಂಧಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ.
ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದೂ ಮತ್ತು ಕ್ರೈಸ್ತ ಧರ್ಮದ ಸಾವಿರಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕಿಡ್ನಾಪ್ ಮಾಡಿ ಮುಸ್ಲಿಂ ಧರ್ಮದವರೊಂದಿಗೆ ವಿವಾಹ ಮಾಡಿಸುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಧರ್ಮನಿಂದನೆಯ ಸುಳ್ಳು ಆರೋಪದ ಮೇಲೆ ಅಸಿಯಾ ಬೀಬಿ ಎಂಬ ಕ್ರೈಸ್ತ ಮಹಿಳೆಗೆ ಶಿಕ್ಷೆ ವಿಧಿಸಿದ ಪ್ರಕರಣದ ಬಗ್ಗೆಯೂ ಯುರೋಪಿಯನ್ ಒಕ್ಕೂಟ ಉಲ್ಲೇಖಿಸಿದ್ದು ಎಚ್ಚರಿಕೆಯ ಸಂದೇಶ ರವಾನಿಸಿದೆ.