ಕೊಲಂಬೊ, ಎ30(Daijiworld News/SS): ಶ್ರೀಲಂಕಾದಲ್ಲಿ ಮತ್ತೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸೇನಾ ಸಮವಸ್ತ್ರ ಧರಿಸಿ, ವ್ಯಾನ್ ಮೂಲಕ ಉಗ್ರರು ಮತ್ತೊಂದು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ಸಚಿವಾಲಯದ ಭದ್ರತಾ ವಿಭಾಗ (ಎಂಎಸ್ಡಿ) ಅಧಿಕಾರಿಗಳಿಗೆ ಹಾಗೂ ಸಂಸದರಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.
ಮಾತ್ರವಲ್ಲ, ಆರೋಗ್ಯ ಸಚಿವ ರಜಿತ ಸೇನಾರತ್ನೆ ಅವರು ದಾಳಿ ನಡೆಯುವ ಬಗ್ಗೆ ಎಂಎಸ್ಡಿ ಪತ್ರ ಬರೆದಿರುವುದನ್ನು ದೃಢಪಡಿಸಿದ್ದಾರೆ.
ಇನ್ನೊಂದೆಡೆ ಶ್ರೀಲಂಕಾದ ಬೌದ್ಧ ದೇವಾಲಯಗಳ ಮೇಲೆ ಮಹಿಳಾ ಬಾಂಬರ್ಗಳು ಭಕ್ತರ ಸೋಗಿನಲ್ಲಿ ದಾಳಿ ನಡೆಸಲು ಯೋಜಿಸಿರುವ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ನಿಷೇಧಿತ ಸ್ಥಳೀಯ ಭಯೋತ್ಪಾದಕ ಸಂಘಟನೆ ನ್ಯಾಷನಲ್ ತೌಹೀದ್ ಜಮಾತ್ನ (ಎನ್ಟಿಜೆ) ಮಹಿಳಾ ಬಾಂಬರ್ಗಳು ಬೌದ್ಧ ದೇವಾಲಯದ ಮೇಲೆ ದಾಳಿ ನಡೆಸುವ ಸಾಧ್ಯತೆ ಕುರಿತು ಶ್ರೀಲಂಕಾದ ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ.
ಪೂರ್ವ ಪ್ರಾಂತ್ಯದ ಸೈಂತಮರುತು ಪ್ರದೇಶದ ಮನೆ ಮೇಲೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ವಶಪಡಿಸಿಕೊಂಡಿರುವ ಬಿಳಿ ಸ್ಕರ್ಟ್ ಮತ್ತು ಬ್ಲೌಸ್, ಮಹಿಳಾ ಬಾಂಬರ್ಗಳು ಭಕ್ತರ ಸೋಗಿನಲ್ಲಿ ದಾಳಿ ನಡೆಸುವ ಸಾಧ್ಯತೆಯನ್ನು ಸೂಚಿಸಿದೆ ಎಂದು ವರದಿ ಮಾಡಿದೆ.