ಕೊಲಂಬೋ, ಏ 29 (Daijiworld News/MSP): ನಿರಂತರ ಬಾಂಬ್ ಸ್ಪೋಟದಿಂದ ತತ್ತರಿಸಿ ಹೋದ ಶ್ರೀಲಂಕಾ ಭದ್ರತಾ ದೃಷ್ಟಿಯಿಂದ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೇ ಕಾರಣಕ್ಕಾಗಿ ಬುರ್ಖಾ ತೊಡುವುದನ್ನೂ ನಿಷೇಧಿಸಿದೆ. ಸೋಮವಾರದಿಂದಲೇ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಬುರ್ಖಾಕ್ಕೆ ನಿಷೇಧ ವಿಧಿಸಿ ಆದೇಶಿಸಿದ್ದಾರೆ.
ಬುರ್ಖಾ ತೊಡುವುದರಿಂದ ದೇಶದ ಭದ್ರತೆಗೆ ತೊಂದರೆಯುಂಟಾಗುತ್ತಿದೆ. ಮಾತ್ರವಲ್ಲದೆ ಮೂಲಭೂತವಾದದ ಸಂಕೇತವಾಗುತ್ತಿದ್ದು, ದೇಶದ ರಕ್ಷಣೆಗಾಗಿ ಉಗ್ರಗಾಮಿಗಳ ಗುರುತು ಪತ್ತೆ ಮಾಡಲು ಶ್ರೀಲಂಕಾ ಅಧ್ಯಕ್ಷರು ಖಡಕ್ ನಿರ್ಧಾರ ತಳೆದಿದ್ದಾರೆ.
ಬುರ್ಖಾ ಧರಿಸಿದ ಮಹಿಳಾ ಬಾಂಬರ್ ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ, ದ್ವೀಪ ರಾಷ್ಟ್ರದ ಕೆಲ ಸಂಸದರು ಬುರ್ಖಾ ನಿಷೇಧಗೊಳಿಸುವಂತೆ ಧ್ವನಿ ಎತ್ತಿದ್ದರು. ಯು ಎನ್ ಪಿ ಪಕ್ಷದ ನಾಯಕ ಅಶು ಮಾರಸಿಂಘೆ, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ’ಬುರ್ಖಾ ಧರಿಸಿದ ಮಹಿಳೆ ಬಾಂಬ್ ದಾಳಿಯಲ್ಲಿ ನೇರ ಭಾಗಿಯಾಗಿರುವುದು ಕಂಡುಬಂದಿದೆ. ಮಾತ್ರವಲ್ಲದೆ ಅನೇಕ ಉಗ್ರರು ಬುರ್ಖಾ ಧರಿಸಿ ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ. ಬುರ್ಖಾ ಎನ್ನುವುದು ಮುಸ್ಲಿಂ ಮಹಿಳೆಯರ ಸಾಂಪ್ರದಾಯಿಕ ವಸ್ತ್ರ ಅಲ್ಲ, ದೇಶದ ಕೆಲ ಭಾಗದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಪ್ರವೇಶಿಸುವಾಗ ಬುರ್ಖಾ ಕಡ್ಡಾಯವಾಗಿ ತೆಗೆಯಬೇಕೆಂಬ ಸೂಚನೆ ನೀಡಲಾಗಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಬುರ್ಖಾ ನಿಷೇಧ ಒಳಿತು ಎಂದು ಸೂಚಿಸಿದ್ದರು.
ಈಸ್ಟರ್ ಭಾನುವಾರದಂದು ಶ್ರೀಲಂಕಾದ ಕೊಲೊಂಬೋದಲ್ಲಿ ಚರ್ಚ್ ಮತ್ತು ಹೊಟೇಲ್ಗಳಲ್ಲಿ ಆತ್ಮಾಹುತಿ ಬಾಂಬ್ ನಡೆದಿದ್ದು, ಈ ವರೆಗೆ 250 ಮಂದಿ ಮೃತಪಟ್ಟಿದ್ದಾರೆ. 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆ ಬಳಿಕವೂ ಶ್ರೀಲಂಕದಲ್ಲಿ ಹಲವೆಡೆ ಬಾಂಬ್ ಸ್ಪೋಟ ನಡೆದಿತ್ತು .