ಅಬುದಾಭಿ,ಏ 27 (Daijiworld News/MSP): ಯುಎಇ ಪ್ರಕಟಿಸಿದ 'ಸಹಿಷ್ಟುತೆಯ ವರ್ಷ' ಹಿನ್ನಲೆಯಲ್ಲಿ ಅನಿವಾಸಿಗಳಿಗಿರುವ ವಿವಾಹದ ಕಾನೂನುಗಳನ್ನು ಬದಿಗೊತ್ತಿದ ಯುಎಇ ಸರಕಾರವು, ಭಾರತೀಯ ಮೂಲದ ಹಿಂದೂ ತಂದೆ ಕಿರಣ್ ಬಾಬು ಮತ್ತು ಮುಸ್ಲಿಂ ತಾಯಿ ಸನಮ್ ಸಾಬೂ ಸಿದ್ದಿಕ್ ಗೆ ಜನಿಸಿದ ಹೆಣ್ಣು ಮಗುವಿಗೆ ಜನನ ಪ್ರಮಾಣ ಪತ್ರ ನೀಡಿದೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಅನಿವಾಸಿಗಳಿಗೆ ಇರುವ ವಿವಾಹಕ್ಕೆ ಸಂಬಂಧಿಸಿ ಒಂದು ಗಂಭೀರ ನಿಯಮವಿದೆ. ಇಲ್ಲಿ ಒಬ್ಬ ಮುಸ್ಲಿಂ ಪುರುಷ ಮುಸ್ಲಿಮರೇತರ ಮಹಿಳೆಯನ್ನು ವಿವಾಹವಾಗಬಹುದು. ಆದರೆ, ಮುಸ್ಲಿಂ ಮಹಿಳೆ ಯಾವುದೇ ಕಾರಣಕ್ಕೂ ಮುಸ್ಲಿಮೇತರ ಪುರುಷನನ್ನು ಮದುವೆಯಾಗುವಂತಿಲ್ಲ.
ಶಾರ್ಜಾದಲ್ಲಿ ಉದ್ಯಮಿಯಾಗಿರುವ ಭಾರತೀಯ ಮೂಲದ ಕಿರಣ್ ಬಾಬು ಮತ್ತು ಸನಮ್ ಸಾಬೂ ಸಿದ್ದಿಕ್ 2016ರಲ್ಲಿ ಕೇರಳದಲ್ಲಿ ದಾಂಪತ್ಯ ಜೀವನ ಪ್ರವೇಶಿಸಿದ್ದರು. 2018ರ ಜುಲೈನಲ್ಲಿ ಈ ದಂಪತಿಗೆ ಮಗು ಹುಟ್ಟಿದಾಗ ಸಂಕೀರ್ಣ ಪರಿಸ್ಥಿತಿ ನಿರ್ಮಾಣಗೊಂಡು, ಯುಎಇ ಕಾನೂನು ಪ್ರಕಾರ ಮಗುವಿಗೆ ಜನನ ಪ್ರಮಾಣ ಪತ್ರ ನೀಡಲು ಆಸ್ಪತ್ರೆ ನಿರಾಕರಣೆ ಮಾಡಿತ್ತು. ಹಿಂದೂ ಪುರುಷ-ಮುಸ್ಲಿಂ ಮಹಿಳೆಗೆ ಹುಟ್ಟಿದ ಮಗುವಿಗೆ ಜನನ ಪ್ರಮಾಣಪತ್ರ ಕೊಡುವುದು ಕಾನೂನು ಪ್ರಕಾರ ಸಾಧ್ಯವಿರಲಿಲ್ಲ.
ಕಿರಣ್ ಕೋರ್ಟ್ ಮೊರೆ ಹೋದರೂ ನಾಲ್ಕು ತಿಂಗಳು ವಿಚಾರಣೆ ನಡೆದು ದಾವೆಯನ್ನು ತಿರಸ್ಕರಿಸಲಾಯಿತು. ಈ ನಡುವೆ ದಂಪತಿಗೆ ವರವಾಗಿ ಬಂದದ್ದು ಯುಎಇ ಪ್ರಕಟಿಸಿದ 'ಸಹಿಷ್ಟುತೆಯ ವರ್ಷ- 2019'. ಕಿರಣ್ ಯುಎಇ ವಿದೇಶಿಯರಿಗೆ ನೀಡುವ ಕ್ಷಮಾದಾನದ ಕಾನೂನಿನ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಭಾರತೀಯ ದೂತಾವಾಸ ಕಚೇರಿಯು ಕಾನೂನನ್ನು ಕಿರಣ್ ಅವರು ಬಳಸಿಕೊಳ್ಳುವುದಕ್ಕೆ ನೆರವಾಯಿತು. ಆದರೆ, ಮಗುವಿಗೆ ವಲಸೆ ಕ್ಲಿಯರೆನ್ಸೇ ಸಿಗಲಿಲ್ಲ. ಯಾಕೆಂದರೆ, ಮಗು ಹುಟ್ಟಿದ್ದಕ್ಕೆ ಯಾವ ದಾಖಲೆಯೂ ಇರಲಿಲ್ಲ. ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಸೂಚನೆಯ ಪ್ರಕಾರವೇ, ಕಿರಣ್ ಮತ್ತೆ ನ್ಯಾಯಾಲಯದ ಮೆಟ್ಟಲೇರಿದರು. ಆದರೆ ಈ ಬಾರಿ ಅವರ ಪ್ರಕರಣ "ವಿಶೇಷ ಪ್ರಕರಣ" ಎಂದು ಪರಿಗಣಿಸಿ ನ್ಯಾಯಾಲಯದಿಂದ ಅನುಮೋದನೆ ದೊರೆಯಿತು. ಆರೋಗ್ಯ ಇಲಾಖೆಯೂ ಇದಕ್ಕೆ ಸಮ್ಮತಿಸಿತು.
ಕೊನೆಗೂ ಏಪ್ರಿಲ್ 14ರಂದು ವಿಷು ಹಬ್ಬದ ದಿನದಂದೇ "ಕಿರಣ್ ಬಾಬು - ಸನಮ್ ಸಾಬೂ ಸಿದ್ದಿಕ್ " ದಂಪತಿಯ ಪುತ್ರಿಯ ಅನಾತ್ಮ ಅಸೆಲಿನ ಕಿರಣ್ ಎಂಬ ಹೆಸರನ್ನು ಹೊತ್ತ ಜನನ ಪ್ರಮಾಣಪತ್ರ ಕೈ ಸೇರಿಕೊಂಡಿತು. ಯುಎಇ ಇದೇ ಪ್ರಥಮ ಬಾರಿಗೆ ತನ್ನ ನಿಯಮಗಳನ್ನು, ಸಂಪ್ರದಾಯವನ್ನು ಮೀರಿ ಭಾರತೀಯ ಕಂದಮ್ಮನಿಗೆ ಜನನ ಪ್ರಮಾಣಪತ್ರ ನೀಡುವ ಮೂಲಕ ಔದಾರ್ಯ ಮೆರೆದಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.