ಕೊಲಂಬೋ,ಏ28(DaijiworldNews/AZM): ಏ.21 ಕಳೆದ ಭಾನುವರದಂದು ಶ್ರೀಲಂಕಾದ ಕೊಲೊಂಬೋ ಸೇರಿದಂತೆ ವಿವಿಧೆಡೆ ನಡೆದ ಸರಣಿ ಬಾಂಬ್ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 108 ಶಂಕಿತರನ್ನು ಬಂಧಿಸಿದ್ದು, ಇವರಲ್ಲಿ ತಮಿಳು ಮಾಧ್ಯಮ ಶಿಕ್ಷಕ, ಶಾಲಾ ಪ್ರಾಂಶುಪಾಲ ಮತ್ತು ವೈದ್ಯರು ಸೇರಿರುವುದು ಅಚ್ಚರಿಯನ್ನುಂಟುಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 108 ಶಂಕಿತರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಖಚಿತ ಸುಳಿವಿನ ಮೇರೆಗೆ 40 ವರ್ಷದ ಶಾಲಾ ಶಿಕ್ಷಕನೊಬ್ಬನನ್ನು ಬಂಧಿಸಿದ ಪೊಲೀಸರು, ಆತನ ಬಳಿ ಇದ್ದ 50 ಸಿಮ್ಕಾರ್ಡ್ಗಳು ಮತ್ತು ಇತರ ಶಂಕಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ದಾಳಿಯಲ್ಲಿ ಶಾಲಾ ಪ್ರಾಂಶುಪಾಲ ಮತ್ತು ವೈದ್ಯನೊಬ್ಬನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದು, ಕೆಲವು ಮಹತ್ವದ ಮಾಹಿತಿಗಳು ಲಭಿಸಿವೆ.
ಬಂಧಿತರಲ್ಲಿ ಕೆಲವರು ನ್ಯಾಷನಲ್ ತೌಹಿದ್ ಜಮಾತ್ (ಎನ್ಟಿಜೆ) ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಗಳ ಪರ ಒಲವು ಹೊಂದಿರುವ ಬೆಂಬಲಿಗರಾಗಿದ್ದಾರೆ. ಇನ್ನು ಶನಿವಾರದಂದು ಪೊಲೀಸ್ ಎನ್ಕೌಂಟರ್ ವೇಳೆ ತಮ್ಮನ್ನು ತಾವು ಸ್ಫೋಟಿಸಿಕೊಂಡು ಮೃತಪಟ್ಟ ಮೂವರು ಉಗ್ರರು ತಮ್ಮ ಸಂಘಟನೆಯ ಸದಸ್ಯರು ಎಂದು ಐಸೀಸ್ ಇಂದು ಅಧಿಕೃತ ಹೇಳಿಕೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.