ಇಸ್ಲಾಮಾಬಾದ್, ಫೆ 11 (DaijiworldNews/PC): ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮವಾಗಿದೆ, ಮತ ಎಣಿಕೆ ವೇಳೆ ಸರಿಯಾದ ಕ್ರಮ ಅನುಸರಿಸಿಲ್ಲ ಎಂದು ಪಾಕ್ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ.
ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ಪಾಕ್ನ ನ್ಯಾಯಾಲಯಗಳು ಅರ್ಜಿಗಳಿಂದ ತುಂಬಿ ಹೋಗಿವೆ ಎಂದು ವರದಿಯಾಗಿದೆ.
ಲಾಹೋರ್ ಹೈಕೋರ್ಟ್ನಲ್ಲಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದು, ಸಿಂಧ್ ಹೈಕೋರ್ಟ್ನಲ್ಲಿ ಕನಿಷ್ಠ ಮೂರು ಅರ್ಜಿಗಳು ಸಲ್ಲಿಕೆಯಾಗಿವೆ.
ಪಾಕಿಸ್ತಾನದ ಪಾರ್ಲಿಮೆಂಟ್ ಚುನಾವಣೆಯ ಫಲಿತಾಂಶವನ್ನು ಅಲ್ಲಿನ ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ. ಮಾಜಿ ಪ್ರಧಾನಿಗಳಾದ ನವಾಜ್ ಷರೀಫ್ ಹಾಗೂ ಇಮ್ರಾನ್ ಖಾನ್ ಇಬ್ಬರೂ ಗೆಲವು ತಮ್ಮದೇ ಎಂದು ಈಗಾಗಲೇ ಘೋಷಿಸಿಕೊಂಡಿದ್ದಾರೆ.
ಪಾಕ್ ಚುನಾವಣಾ ಆಯೋಗ, 265 ಕ್ಷೇತ್ರಗಳ ಪೈಕಿ 259 ಸ್ಥಾನಗಳ ಫಲಿತಾಂಶ ಪ್ರಕಟಿಸಿದೆ. ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 102 ಸ್ಥಾನ ಗೆದ್ದಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ 74, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 54 ಸ್ಥಾನಗಳಲ್ಲಿ ಗೆದ್ದಿದೆ. ಪಕ್ಷೇತರರು ಕೆಲ ಸ್ಥಾನಗಳನ್ನು ಗೆದ್ದಿದ್ದಾರೆ.
ಪಿಎಂಎಲ್–ಎನ್ನ ವರಿಷ್ಠ ನವಾಜ್ ಷರೀಫ್ ಹಾಗೂ ಅವರ ಪುತ್ರಿ ಮರಿಯಮ್ ನವಾಜ್ ಹಾಗೂ ಐಪಿಪಿ ಅಧ್ಯಕ್ಷ ಅಲೀಮ್ ಖಾನ್ ಅವರ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.