ಲಾಹೋರ್, ಫೆ 10(DaijiworldNews/AA): ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಕೇಂದ್ರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಒಪ್ಪಿಗೆ ಸೂಚಿಸಿವೆ.
ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಅವರ ಸಹೋದರ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಂಜಾಬ್ ಹಂಗಾಮಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಅವರ ನಿವಾಸದಲ್ಲಿ ಪಿಪಿಪಿ ಉನ್ನತ ನಾಯಕರನ್ನು ಭೇಟಿಯಾಗಿದ್ದರು. ಈ ವೇಳೆ ಶೆಹಬಾಜ್ ಷರೀಫ್ ಅವರು ನವಾಜ್ ಷರೀಫ್ ಅವರ ಸಮ್ಮಿಶ್ರ ಸರ್ಕಾರ ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಇದಕ್ಕೆ ಬಿಲಾವಲ್ ಭುಟ್ಟೋ ಮತ್ತು ಅವರ ತಂದೆ ಆಸಿಫ್ ಅಲಿ ಜರ್ದಾರಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಪಂಜಾಬ್ ಹಾಗೂ ಕೇಂದ್ರದಲ್ಲಿ ಸರ್ಕಾರ ರಚಿಸಲು ಒಪ್ಪಿಕೊಂಡಿರುವ ಎರಡು ಪಕ್ಷಗಳ ನಾಯಕರು, ಮುಂದಿನ ಸಭೆಯಲ್ಲಿ ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸುವ ಸಾಧ್ಯತೆ ಇದೆ. ಪಾಕಿಸ್ತಾನದಲ್ಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರೆತಿಲ್ಲ. ಇದೇ ವೇಳೆ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಗಿದ್ದು, ಇಂದು ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಲಿದೆ ಎಂದು ತಿಳಿದುಬಂದಿದೆ.