ನ್ಯೂಯಾರ್ಕ್, ಫೆ 10 (DaijiworldNews/MS): ಅಮೇರಿಕಾದಲ್ಲಿ ಭಾರತೀಯರನ್ನು ಗುರಿಯಾಗಿರಿಸಿಕೊಂಡು ಹತ್ಯೆ ಹಾಗು ಮಾರಣಾಂತಿಕ ದಾಳಿ ನಡೆಯುತ್ತಿರುವ ಬೆನ್ನಲ್ಲೇ, ಮತ್ತೋರ್ವ ಭಾರತೀಯ ಮೂಲದ ವ್ಯಕ್ತಿ ಸಾವನ್ನಪಿದ್ದಾರೆ. 41 ವರ್ಷದ ವಿವೇಕ್ ತನೇಜಾ ಮೃತ ವ್ಯಕ್ತಿಯಾಗಿದ್ದಾರೆ. ವಾಷಿಂಗ್ಟನ್ನ ಡೌನ್ಡೌನ್ ರೆಸ್ಟೊರೆಂಟ್ನ ಹೊರಗಡೆ ನಡೆದ ವಾಗ್ವಾದದ ವೇಳೆ ವಿವೇಕ್ ತನೇಜಾ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಲಾಗಿತ್ತು.
ವಾಷಿಂಗ್ಟನ್ನ ಶಾಟೋ ರೆಸ್ಟೋರೆಂಟ್ ಬಳಿ ಫೆಬ್ರವರಿ 2ರ ನಸುಕಿನ ಜಾವ 2 ಗಂಟೆ ಸುಮಾರಿಗೆ ವಿವೇಕ್ ತನೇಜಾ ಮೇಲೆ ದಾಳಿ ನಡೆದಿತ್ತು. ದಾಳಿಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ವಿವೇಕ್ ತನೇಜಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಚಿಕಿತ್ಸೆ ಫಲಿಸದೇ ವಿವೇಕ್ ತನೇಜಾ ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ವಿವೇಕ್ ತನೇಜಾ ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ರೆಸ್ಟೋರೆಂಟ್ ಹೊರಗಡೆ ಮಾತಿನ ಚಕಮಕಿಯಲ್ಲಿ ತೊಡಗಿಕೊಂಡಿದ್ದರು. ಬಳಿಕ ವಾಗ್ವಾದವೂ ದೈಹಿಕವಾಗಿ ಹಲ್ಲೆ ಮಾಡುವ ಮಟ್ಟಿಗೆ ತಿರುಗಿತ್ತು. ತನೇಜಾ ಅವರ ತಲೆಯನ್ನು ನೆಲಕ್ಕೆ ಅಪ್ಪಳಿಸಿದ್ದರಿಂದ ವಿವೇಕ್ ತನೇಜಾ ಗಂಭೀರವಾಗಿ ಗಾಯಗೊಂಡು ಮೂರ್ಚೆ ತಪ್ಪಿದ್ದರು ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಶಂಕಿತನಿಗಾಗಿ ಶೋಧ ನಡೆಸಲಾಗುತ್ತಿದೆ. ಆತನ ಗುರುತು ಪತ್ತೆಯಾಗಿಲ್ಲ.ಆತನ ಬಂಧನ ಮತ್ತು ಶಿಕ್ಷೆಗೆ ಕಾರಣವಾಗುವ ಮಾಹಿತಿಯನ್ನು ಒದಗಿಸುವವರಿಗೆ ಪೊಲೀಸರು $25,000 ಬಹುಮಾನವನ್ನು ಘೋಷಿಸಿದ್ದಾರೆ.
ಈ ವರ್ಷ ಅಮೆರಿಕದಲ್ಲಿ ಐವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.