ಇಸ್ಲಮಾಬಾದ್, ಫೆ 3(DaijiworldNews/AK): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಖಾನ್ ಅವರ ವಿವಾಹವು ಕಾನೂನುಬಾಹಿರ ಎಂದು ತೀರ್ಪು ನೀಡಿರುವ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಇದರ ಜೊತೆಗೆ ಗುರುವಾರ ರಾಷ್ಟ್ರೀಯ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ರಹಸ್ಯಗಳನ್ನು ಸೋರಿಕೆ ಮಾಡಿದ್ದಕ್ಕಾಗಿ 10 ವರ್ಷಗಳು ಮತ್ತು ಅಕ್ರಮವಾಗಿ ರಾಜ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅವರ ಪತ್ನಿಯೊಂದಿಗೆ 14 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಇಬ್ಬರಿಗೂ ತಲಾ 5,00,000 ರೂ. (ಪಾಕಿಸ್ತಾನ ರೂಪಾಯಿ) ದಂಡ ವಿಧಿಸಲಾಗಿದೆ.
ಬುಶ್ರಾ ತನ್ನ ಹಿಂದಿನ ಪತಿಗೆ ವಿಚ್ಛೇದನ ನೀಡಿದ ನಂತರ ಮತ್ತು ಖಾನ್ ಅವರನ್ನು ವಿವಾಹವಾದ ನಂತರ `ಇದ್ದತ್’ ಎಂದು ಕರೆಯಲ್ಪಡುವ ಇಸ್ಲಾಂನಿಂದ ಕಡ್ಡಾಯವಾದ ಕಾಯುವ ಅವಧಿಯನ್ನು ಪೂರ್ಣಗೊಳಿಸಲಿಲ್ಲ ಎಂದು ಆರೋಪಿಸಲಾಗಿತ್ತು. ಈ ಆರೋಪಗಳನ್ನು ಖಾನ್ ದಂಪತಿ ನಿರಾಕರಿಸಿದ್ದರು. ವಿಚಾರಣೆ ವೇಳೆ ಇದೀಗ ಆರೋಪ ಸಾಬೀತಾಗಿದೆ.
ಈಗಾಗಲೇ ಇಮ್ರಾನ್ ಖಾನ್ ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿ ಜೈಲಿನಲ್ಲಿದ್ದಾರೆ. ಅವರ ಪತ್ನಿ ಇಸ್ಲಾಮಾಬಾದ್ನಲ್ಲಿರುವ ಅವರ ಭವನದಲ್ಲಿ ಶಿಕ್ಷೆಯನ್ನು ಅನುಭವಿಸಲು ಅನುಮತಿಸಲಾಗಿದೆ ಎಂದು ವರದಿಯಾಗಿದೆ.