ಫ್ರಾನ್ಸ್, ಫೆ 03 (DaijiworldNews/PC): ಭಾರತದ ಯುಪಿಐ ತಂತ್ರಜ್ಞಾನ ಫ್ರಾನ್ಸ್ಗೆ ಕಾಲಿಟ್ಟಿದೆ. ಇಮಾನ್ಯುಯೆಲ್ ಮ್ಯಾಕ್ರಾನ್ ಅವರು ಭಾರತದಿಂದ ವಾಪಸ್ ಹೋದ ಬೆನ್ನಲ್ಲೇ ಫ್ರಾನ್ಸ್ನಲ್ಲಿ ಭಾರತದ ಯುಪಿಐ ಪಾವತಿ ಶುರುವಾಗಿದ್ದು, ಫೆ 2 ರಂದು ಪ್ಯಾರೀಸ್ನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯುಪಿಐ ಪಾವತಿಗೆ ಚಾಲನೆ ಸಿಕ್ಕಿದೆ.
ಭಾರತದ ಪ್ರವಾಸಿಗರು ಇನ್ನು ಯುಪಿಐ ಬಳಸಿ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಖರೀದಿಸಬಹುದು ಹಾಗೂ ಐಫೆಲ್ ಟವರ್ಗೆ ಭೇಟಿ ನೀಡಲು ಟಿಕೆಟ್ಗಳನ್ನು ಬುಕ್ ಮಾಡಬಹುದು ಎಂದು ಎನ್ಪಿಸಿಐ ಮಾಹಿತಿಯನ್ನು ನೀಡಿದೆ.
ಐಫೆಲ್ ಟವರ್ಗೆ ಭೇಟಿ ನೀಡುವ ಅಂತರರಾಷ್ಟ್ರೀಯ ಪ್ರವಾಸಿಗರಲ್ಲಿ ಭಾರತೀಯರು 2ನೇ ಸ್ಥಾನದಲ್ಲಿದ್ದಾರೆ. ಆದ್ದರಿಂದ ಈ ಸೌಲಭ್ಯವನ್ನು ಜಾರಿ ಮಾಡಲಾಗಿದ್ದು, ಭಾರತೀಯ ಪ್ರವಾಸಿಗರು QR ಕೋಡ್ ಮೂಲಕ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದಾಗಿದೆ.
ಈ ಯುಪಿಐ ತಂತ್ರಜ್ಞಾನದ ಬಗ್ಗೆ ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಯುಪಿಐ ಪಾವತಿಯನ್ನು ಜಾಗತಿಕಗೊಳಿಸುವ ದೃಷ್ಟಿ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ ಎಂದು ಬರೆದುಕೊಂಡಿದೆ.