ಚೀನಾ, ಫೆ 01(DaijiworldNews/SK): ಇಬ್ಬರು ಪುಟ್ಟ ಮಕ್ಕಳನ್ನು ಅಪಾರ್ಟ್ಮೆಂಟ್ 15 ನೇ ಮಹಡಿಯಿಂದ ಎಸೆದು ಹತ್ಯೆ ಮಾಡಿ, ಚೀನಾ ರಾಷ್ಟ್ರವ್ಯಾಪಿ ಆಕ್ರೋಶ ಹುಟ್ಟು ಹಾಕಿದ್ದ ಪ್ರಕರಣದಲ್ಲಿ, ಜೋಡಿಗೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
2020 ರಲ್ಲಿ ನೈಋತ್ಯ ಚೀನಾದ ಚಾಂಗ್ಕಿಂಗ್ನಲ್ಲೀ ಈ ಘಟನೆ ನಡೆದಿದ್ದು ಪಾರ್ಟ್ಮೆಂಟ್ 15 ನೇ ಮಹಡಿಯಿಂದ ಬಿದ್ದು ಎರಡು ವರ್ಷದ ಬಾಲಕಿ ಮತ್ತು ಒಂದು ವರ್ಷದ ಬಾಲಕನ ಮೃತಪಟ್ಟಿದ್ದರು. ಮೊದಲಿಗೆ ಇದು ಆಕಸ್ಮಿಕ ಸಾವು ಎಂದು ಕಂಡು ಬಂದರೂ ತನಿಖೆಯ ಬಳಿಕ ವ್ಯವಸ್ಥಿತ ಕೊಲೆ ಪ್ರಕರಣ ಕಂಡುಬಂದಿತ್ತು.
ಜುಲೈ 2021 ರಲ್ಲಿ ಪ್ರಕರಣದ ಮೊದಲ ವಿಚಾರಣೆಯ ಸಂದರ್ಭದಲ್ಲಿ, ಮಕ್ಕಳ ತಾಯಿ ಚೆನ್ ಮೈಲಿನ್, ನ್ಯಾಯಾಲಯದಲ್ಲಿ ಪರಿಹಾರವನ್ನು ಕೋರುವುದರ ಜೊತೆಗೆ ತನ್ನ ಮಾಜಿ ಪತಿ ಮತ್ತು ಅವನ ಗೆಳತಿಗೆ ಕಠಿಣ ಶಿಕ್ಷೆಗೆ ವಿಧಿಸುವಂತೆ ಒತ್ತಾಯಿಸಿದ್ದರು.
ಉದ್ದೇಶಪೂರ್ವಕ ನರಹತ್ಯೆಯ ಅಪರಾಧಕ್ಕಾಗಿ 2021 ರ ಡಿ. 28 ರಂದು ಚಾಂಗ್ಕಿಂಗ್ನಲ್ಲಿರುವ ನ್ಯಾಯಾಲಯವು ಜಾಂಗ್ ಮತ್ತು ಯೆಗೆ ಮರಣದಂಡನೆ ವಿಧಿಸಿತು. ಈ ಕುರಿತಾಗಿ ಜಾಂಗ್ ಮತ್ತು ಯೆ ಚೆಂಗ್ಚೆನ್ ಮೇಲ್ಮನವಿ ಕೂಡ ಸಲ್ಲಿಸಿದರು.
ಇನ್ನು ಕಳೆದ ವರ್ಷ ಏಪ್ರಿಲ್ 6 ರಂದು ನಡೆದ ಎರಡನೇ ವಿಚಾರಣೆಯಲ್ಲಿ ಜಾಂಗ್ ತನ್ನ ಮಕ್ಕಳ ಸಾವುಗಳು ಅಪಘಾತದಿಂದ ಸಂಭವಿಸಿದೆ ಎಂದು ನೀಡಿದ ದೂರನ್ನು ಹಿಂಪಡೆದುಕೊಂಡಿದ್ದು, ಇದೀಗ ಈ ಕುರಿತಾಗಿ ನಡೆದ ಹೆಚ್ಚಿನ ತನಿಖೆಯ ಆಧಾರದ ಮೇಲೆ ಮಕ್ಕಳ ತಂದೆ ಝಾಂಗ್ ಬೋ ಹಾಗೂ ಆತನ ಗೆಳತಿ ಯೆ ಚೆಂಗ್ಚೆನ್ ಪ್ರಕರಣದ ಅಪರಾಧಿಗಳೆಂದು ಪರಿಗಣಿಸಿ ಚೀನಾದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಪೀಪಲ್ಸ್ ಮರಣದಂಡನೆಯನ್ನು ವಿಧಿಸಿದೆ.