ಮಾಲೆ, ಜ 31 (DaijiworldNews/AA): ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಜನತೆಯ ಬಳಿ ಔಪಚಾರಿಕವಾಗಿ ಕ್ಷಮೆಯಾಚಿಸುವಂತೆ ಮಾಲ್ಡೀವ್ಸ್ ಅಧ್ಯಕ್ಷರಿಗೆ ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರು ಕ್ಷಮೆಯಾಚಿಸುವಂತೆ ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ ನಾಯಕ ಖಾಸಿಮ್ ಇಬ್ರಾಹಿಂ ಒತ್ತಾಯಿಸಿದ್ದಾರೆ. ಯಾವುದೇ ದೇಶವಾಗಲಿ ಅಥವಾ ನಮ್ಮ ನೆರೆಹೊರೆಯ ದೇಶದ ಸಂಬಂಧದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ನಾವು ಮಾತನಾಡಬಾರದು. ನಾವು ನಮ್ಮ ರಾಜ್ಯಕ್ಕೆ ಬಾಧ್ಯತೆಯನ್ನು ಹೊಂದಿದ್ದೇವೆ. ಅದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಖಾಸಿಮ್ ಹೇಳಿದ್ದಾರೆ.
ಡಿಕ್ರಿಯನ್ನು ರದ್ದುಗೊಳಿಸುವುದರಿಂದ ರಾಷ್ಟ್ರಕ್ಕೆ ನಷ್ಟವುಂಟಾಗುತ್ತದೆ. ಅದನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ರದ್ದುಗೊಳಿಸದಂತೆ ಮುಯಿಜ್ಜು ಅವರಿಗೆ ತಿಳಿಸುತ್ತೇನೆ. ಚೀನಾ ಪ್ರವಾಸದ ಬಳಿಕ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಬಗ್ಗೆ ಕೆಲ ಹೇಳಿಕೆಗಳನ್ನು ನೀಡಿದ್ದಾರೆ. ಈ ಎಲ್ಲಾ ವಿಚಾರವಾಗಿ ಮುಯಿಜ್ಜು ಅವರು ಕ್ಷಮೆಯಾಚಿಸಬೇಕು ಎಂದು ಖಾಸಿಮ್ ತಿಳಿಸಿದ್ದಾರೆ.