ಪಾಕಿಸ್ತಾನ,ಜ 31 (DaijiworldNews/RA):ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿಯಾಗಿರುವ ಇಮ್ರಾನ್ ಖಾನ್ ಹಾಗು ಪತ್ನಿ ಬುಶ್ರಾ ಬೀಬಿಗೆ ಬುಧವಾರ ಪಾಕಿಸ್ತಾನದ ನ್ಯಾಯಾಲಯವು 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಆದೇಶ ಹೊರಡಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಬುಲ್ ಹಸ್ನತ್ ಜುಲ್ಕರ್ನೈನ್ ಅವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಈ ತೀರ್ಪು ಪ್ರಕಟಿಸಿದ್ದಾರೆ.
ಸೋರಿಕೆಯಾದ ದಾಖಲೆಗೆ ಸಂಬಂಧಿಸಿದ ವಿವಾದಾತ್ಮಕ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮಂಗಳವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಈ ಘಟನೆ ಬಳಿಕ ಈ ತೋಷಖಾನಾ ಪ್ರಕರಣದ ಕುರಿತಾದ ಮಹತ್ವದ ತೀರ್ಪು ಹೊರಬಿದ್ದಿದೆ.
ಸೈಫರ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಇದೀಗ ತೋಷಖಾನಾ ಪ್ರಕರಣದಲ್ಲಿ ದಂಪತಿಗೆ 14 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಗೆ ಕೇವಲ ಎಂಟು ದಿನಗಳ ಮೊದಲು ಈ ತೀರ್ಪು ಬಂದಿದೆ.
ಹಾಗಾದ್ರೆ ತೋಷಖಾನಾ ಅಂದ್ರೆ ಏನು...?
ತೋಷಖಾನಾವು ಕ್ಯಾಬಿನೆಟ್ ವಿಭಾಗದ ಆಡಳಿತ ನಿಯಂತ್ರಣದಲ್ಲಿರುವ ಒಂದು ಇಲಾಖೆಯಾಗಿದ್ದು 1974 ರಲ್ಲಿ ಸ್ಥಾಪನೆ ಮಾಡಲಾಗಿದೆ.
ಇದು ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇತರ ಸರ್ಕಾರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಸಂಗ್ರ ಮಾಡಿಕೊಂಡು ಬರುತ್ತಿದೆ.
ಆದ್ರೆ ಖಾನ್ ಅವರು ಪ್ರಧಾನಿಯಾಗಿದ್ದಾಗ ಅವರು ಬೆಲೆಬಾಳುವ ವಾಚ್ ಸೇರಿದಂತೆ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ತಮ್ಮ ಲಾಭಕ್ಕಾಗಿ ಮಾರಾಟ ಮಾಡಿದ್ದರು ಎಂಬುದು ಆರೋಪ ಕೇಳಿ ಬಂದಿದೆ.
ಹೀಗಾಗಿ ಇಸಿಪಿ ಸಲ್ಲಿಸಿದ ಕ್ರಿಮಿನಲ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.ಸದ್ಯ ಈ ಕುರಿತಾದ ತೀರ್ಪುನ್ನು ನ್ಯಾಯಾಲಯ ಹೊರಡಿಸಿದ್ದು ಇಮ್ರಾನ್ ಖಾನ್ ದಂಪತಿಗೆ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.