ನವದೆಹಲಿ,ಜ 30 (DaijiworldNews/RA):ಕಡ್ಗಳ್ಳರ ಕಪಿಮುಷ್ಠಿಯಿಂದ ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆಯು ಪಾಕಿಸ್ತಾನ ತನ್ನ ಶತ್ರು ದೇಶವಾದರೂ ಆ ಎಲ್ಲ ವೈರತ್ವನ್ನು ಮರೆತು ಮಾನವೀಯತೆ ಮೆರೆದಿದ್ದು, ಜಗತ್ತಿನ ನಾನಾ ಭಾಗಗಳಿಂದ ಪ್ರಶಂಸೆಗಳ ಸುರಿಮಳೆಗಳು ಹರಿದು ಬರ್ತಾ ಇದೆ.
ನೌಕಾಪಡೆಯು 19 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಸಂಪೂರ್ಣ ಹಡಗನ್ನು ಕಡಲ್ಗಳ್ಳರ ಹಿಡಿತದಿಂದ ಸುರಕ್ಷಿತವಾಗಿ ರಕ್ಷಣೆ ಮಾಡಿದೆ.
ಸೊಮಾಲಿಯಾದ ಪೂರ್ವ ಕರಾವಳಿ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಸುಮಿತ್ರಾ ಒಂದೇ ದಿನದಲ್ಲಿ ಎರಡನೇ ಬಾರಿಗೆ ಈ ಸಾಹಸ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆಯ ಕೆಲವೇ ಗಂಟೆಗಳ ಮೊದಲು, ಸೊಮಾಲಿ ಕಡಲ್ಗಳ್ಳರು ಮತ್ತೊಂದು ಇರಾನ್ ಧ್ವಜವಿದ್ದ ಮೀನುಗಾರಿಕಾ ಹಡಗು ಎಫ್ವಿ ಇಮಾನ್ ಅಪಹರಿಸಿದ್ದರು. ಇದರ ನಂತರ ನೌಕಾಪಡೆಯು ಸಹಾಯಕ್ಕಾಗಿ ಐಎನ್ಎಸ್ ಸುಮಿತ್ರವನ್ನು ಕಳುಹಿಸಿತು.
ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ನೌಕಾಪಡೆಯು ಹಡಗು ಮತ್ತು ಅದರ 17 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿತ್ತು.
ಈ ಕಾರ್ಯಾಚರಣೆಯ ಸ್ವಲ್ಪ ಸಮಯದ ನಂತರ ತನ್ನ ಯುದ್ಧನೌಕೆ ಐಎನ್ಎಸ್ ಸುಮಿತ್ರಾ ಮತ್ತೆ ಹಡಗಿನ ಅಪಹರಣದ ಬಗ್ಗೆ ಮಾಹಿತಿಯನ್ನು ಪಡೆದು ಕಾರ್ಯಾಚರಣೆ ನಡೆಸಿ ಅಪಹರಣಕ್ಕೊಳಗಾದ ಹಡಗನ್ನು ಪತ್ತೆ ಮಾಡಿದೆ.ಅದನ್ನು ಕಡಲ್ಗಳ್ಳರು ಅಪಹರಿಸಿದ್ದರು. ಅಲ್ಲದೆ 19 ಪಾಕಿಸ್ತಾನಿ ಪ್ರಜೆಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.
ನೌಕಾಪಡೆಗಳು ಬಹಳ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಒತ್ತೆಯಾಳುಗಳಾಗಿದ್ದ 19 ಪಾಕಿಸ್ತಾನಿ ನಾಗರಿಕ ಸಿಬ್ಬಂದಿಯನ್ನು ರಕ್ಷಿಸಿದರು. ಯುದ್ಧನೌಕೆ ಕಡಲ್ಗಳ್ಳರನ್ನು ಶರಣಾಗುವಂತೆ ಒತ್ತಾಯಿಸಿತು.
ನಂತರ ಹಡಗಿನೊಂದಿಗೆ ಎಲ್ಲಾ 19 ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.ಅಷ್ಟೇ ಅಲ್ಲದೆ ಹಡಗನ್ನು ವಶಕ್ಕೆ ಪಡೆದಿದ್ದ ಕಡಲ್ಗಳ್ಳರನ್ನು ವಶಕ್ಕೆ ಪಡೆದಿರುವ ಫೋಟೋಗಳನ್ನು ಭಾರತೀಯ ನೌಕಾಪಡೆ ಹಂಚಿಕೊಂಡಿದೆ.