ಇಸ್ಲಾಮಾಬಾದ್, ಜ 30(DaijiworldNews/AA): ಅಧಿಕೃತ ರಹಸ್ಯಗಳು ಸೋರಿಕೆಯಾದ ದಾಖಲೆಗೆ ಸಂಬಂಧಿಸಿದ ವಿವಾದಾತ್ಮಕ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಂದು 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಧಿಕೃತ ರಹಸ್ಯಗಳನ್ನು ಬಹಿರಂಗಪಡಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ರಾಜ್ಯ ಮಾಧ್ಯಮ ಮತ್ತು ಅವರ ಪಕ್ಷದ ವಕ್ತಾರರು ಮಾಹಿತಿ ನೀಡಿದ್ದಾರೆ. ಇನ್ನು ಸೈಫರ್ ಪ್ರಕರಣದಲ್ಲಿ ಇಮ್ರಾನ್ ಖಾನ್ ಅಷ್ಟೇ ಅಲ್ಲದೆ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಉಪಾಧ್ಯಕ್ಷ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರಿಗೂ ಕೂಡ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಕ್ಷದ ವಕ್ತಾರರು ಎಎಫ್ ಪಿಗೆ ಮಾಹಿತಿ ನೀಡಿದ್ದಾರೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆದ ಪ್ರಕರಣದ ವಿಚಾರಣೆಯ ವೇಳೆ ವಿಶೇಷ ನ್ಯಾಯಾಲಯದ ನ್ಯಾ ಅಬುಲ್ ಹಸ್ನಾತ್ ಜುಲ್ಕರ್ನೈನ್ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಇದು ನೆಪಮಾತ್ರದ ಪ್ರಕರಣವೆಂದು ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಕ್ಷ, ಸೈಫರ್ ಗಿಂತ ಹಾಸ್ಯಾಸ್ಪದವಾದ ಪ್ರಕರಣ ಇನ್ನೊಂದಿಲ್ಲ. ವಿದೇಶಿ ಪಿತೂರಿಯನ್ನು ಬಹಿರಂಗ ಪಡಿಸಿರುವುದಕ್ಕೆ ಪಾಕಿಸ್ತಾನವು ತನ್ನ ಪ್ರಧಾನಿ ಮತ್ತು ವಿದೇಶಾಂಗ ಸಚಿವರನ್ನು ಜೈಲಿನಲ್ಲಿಟ್ಟಿರುವುದಕ್ಕಿಂತ ಹೆಚ್ಚು ಹಾಸ್ಯಾಸ್ಪದವಾಗಿದೆ ಎಂದು ಬರೆದುಕೊಂಡಿದೆ.
ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಇಸ್ಲಾಮಾಬಾದ್ಗೆ ವಾಷಿಂಗ್ಟನ್ನಲ್ಲಿ ಪಾಕಿಸ್ತಾನದ ರಾಯಭಾರಿ ಕಳುಹಿಸಿದ್ದ ರಹಸ್ಯ ರಾಜತಾಂತ್ರಿಕ ಪತ್ರವ್ಯವಹಾರದ ಸೋರಿಕೆಗೆ ಸಂಬಂಧಿಸಿರುವುದನ್ನು ಸೈಫರ್ ಪ್ರಕರಣವೆಂದು ಕರೆಯಲಾಗುತ್ತದೆ.