ಮೆಕ್ಸಿಕೋ ಸಿಟಿ, ಜ 29 (DaijiworldNews/AK): ವಿಮಾನಗಳಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು, ಅವರ ಮೇಲೆ ಹಲ್ಲೆ ನಡೆಸುವುದು, ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುವುದು, ಕುಡಿದ ಮತ್ತಿನಲ್ಲಿ ಗಲಾಟೆ ನಡೆಸುವುದು ಹೀಗೆ ಹತ್ತು ಹಲವು ಪ್ರಕರಣಗಲೂ ಇತ್ತೀಚೆಗೆ ಬೆಳಕಿಗೆ ಬರುತ್ತಿದೆ.
ಇದೀಗ ಇನ್ನೊಂದು ಪ್ರಕರಣ ಪ್ರಯಾಣಿಕರನ್ನೆ ಬೆರಗಾಗುವಂತೆ ಮಾಡಿದೆ. ಮೆಕ್ಸಿಕೋದಲ್ಲಿ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು, ವಿಮಾನದ ರೆಕ್ಕೆಯ ಮೇಲೆ ಓಡಾಡಿದ್ದಾನೆ. ಈತನ ವರ್ತನೆ ಕಂಡು ವಿಮಾನದ ಪ್ರಯಾಣಿಕರು ಹಾಗೂ ಸಿಬ್ಬಂದಿ ದಂಗಾಗಿದ್ದಾರೆ.
ಮೆಕ್ಸಿಕೋ ಸಿಟಿ ವಿಮಾನ ನಿಲ್ದಾಣದಿಂದ ಏರೋಮೆಕ್ಸಿಕೋ ವಿಮಾನವು ಜನವರಿ 25ರಂದು ಬೆಳಗ್ಗೆ 8.50ಕ್ಕೆ ಹಾರಾಟ ಆರಂಭಿಸಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ವಿಮಾನವು ಮಧ್ಯಾಹ್ನ 2 ಗಂಟೆಯಾದರೂ ಹಾರಾಟ ಆರಂಭಿಸಿಲ್ಲ. ಇದರಿಂದ ಹತಾಶೆಗೊಂಡ ಪ್ರಯಾಣಿಕ, ವಿಮಾನದಲ್ಲಿ ಕುಳಿತು ಬೇಜಾರಾಗಿ ತುರ್ತು ನಿರ್ಗಮನ ದ್ವಾರ ತೆಗೆದಿದ್ದಾನೆ.ಅಲ್ಲದೆ, ವಿಮಾನದ ರೆಕ್ಕೆಯ ಮೇಲೆ ಓಡಾಡಿದ್ದಾನೆ. ಪ್ರಯಾಣಿಕನ ವರ್ತನೆಯಿಂದ ವಿಮಾನದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ವಿಮಾನದ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕನು ತುರ್ತು ನಿರ್ಗಮನದ ಬಾಗಿಲು ತೆಗೆದು, ರೆಕ್ಕೆಯ ಮೇಲೆ ಓಡಾಡಿದ್ದಾನೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ. ಬಳಿಕ ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ.