ಚೀನಾ,ಜ 23(DaijiworldNews/RA): ಸೋಮವಾರ ತಡರಾತ್ರಿ ಚೀನಾದ ದಕ್ಷಿಣ ಕ್ಸಿನ್ಜಿಯಾಂಗ್ ನ ಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಯಾವುದೇ ಸಾವು-ನೋವುಗಳು ಮತ್ತು ಆಸ್ತಿಪಾಸ್ತಿಗಳು ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಈ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ 7.2 ಎಂದು ಗುರುತಿಸಲಾಗಿದ್ದು ಸುಮಾರು 80 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಹೇಳಿದೆ.
ಇನ್ನು ಇದೇ ಜನವರಿ 11ರಂದು ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆ ಭೂಕಂಪ ಸಂಭವಿಸಿದ ನಂತರ ದೆಹಲಿ ಮತ್ತು ಎನ್ಸಿಆರ್ನಲ್ಲಿ ಲಘು ಭೂಕಂಪ ಸಂಭವಿಸಿದ್ದವು. ಕಾಬೂಲ್ ನಿಂದ ಈಶಾನ್ಯಕ್ಕೆ 241 ಕಿಮೀ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿತ್ತು. ಮಾತ್ರವಲ್ಲ ನೆರೆಯ ದೇಶ ಪಾಕಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು.
ಸೋಮವಾರ ಬೆಳಗ್ಗೆ ಈಶಾನ್ಯ ಚೀನಾದ ಗುಡ್ಡಗಾಡು ಹಾಗೂ ಪರ್ವತ ಶ್ರೇಣಿಯಲ್ಲಿ ಭೂಕಂಪ ಸಂಭವಿಸಿದ ಭೂ ಕಂಪದಲ್ಲಿ 47 ಮಂದಿ ಜೀವಂತ ಸಮಾಧಿಯಾಗಿದ್ದು, ಇದೇ ವೇಳೆ 200ಕ್ಕೂ ಹೆಚ್ಚು ಮಂದಿಯನ್ನು ತುರ್ತಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕೃತ ಪ್ರಸಾರಸಂಸ್ಥೆಗಳು ವರದಿ ಮಾಡಿವೆ.