ಮಾಲೆ, ಜ 22 (DaijiworldNews/AA): ಪ್ರಸ್ತುತ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸಂಬಂಧ ಹದಗೆಟ್ಟಿದೆ. ಇದೀಗ ಭಾರತ ಸರ್ಕಾರ ನೀಡಿದ ಏರ್ ಅಂಬುಲೆನ್ಸ್ ಸೇವೆಯನ್ನು ಮಾಲ್ಡೀವ್ಸ್ ಸರ್ಕಾರ ಸೂಕ್ತವಾಗಿ ಬಳಸಿಕೊಳ್ಳದೆ 13 ವರ್ಷದ ಅಮಾಯಕ ಬಾಲಕ ಸಾವನ್ನಪ್ಪಿದ್ದಾನೆ.
ಮಾಲ್ಡೀವ್ಸ್ ನ 13 ವರ್ಷದ ಅನಾರೋಗ್ಯಪೀಡಿತ ಬಾಲಕನಿಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಾಲ್ಡೀವ್ಸ್ ನ ವಿಲಿಂಗಿಲಿಯಿಂದ ರಾಜಧಾನಿ ಮಾಲೆಗೆ ಕರೆದೊಯ್ಯಬೇಕಿತ್ತು. ಆದರೆ ಭಾರತ ನೀಡಿದ ಏರ್ ಅಂಬುಲೆನ್ಸ್ ಸೇವೆಯನ್ನು ಮಾಲ್ಡೀವ್ಸ್ ಸರ್ಕಾರ ಬಳಸಲು ಅನುಮತಿ ನೀಡದೆ ಬಾಲಕ ಸಾವನ್ನಪ್ಪಿದ್ದಾನೆ.
ಭಾರತವು ಮಾಲ್ಡೀವ್ಸ್ ನಲ್ಲಿ 3 ವಿಮಾನಗಳು, 2 ನೌಕಾ ಹೆಲಿಕಾಪ್ಟರ್ ಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ 89 ಸಿಬ್ಬಂದಿಯನ್ನು ನಿಯೋಜಿಸಿತ್ತು. ಆದರೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಸೇನಾ ಸಿಬ್ಬಂದಿಯನ್ನು ಮಾರ್ಚ್ 15 ರೊಳಗೆ ಹಿಂಪಡೆಯುವಂತೆ ಭಾರತಕ್ಕೆ ಕೇಳಿಕೊಂಡಿದ್ದಾರೆ.