ಪ್ರೇಗ್ , ಜ 20 (DaijiworldNews/MS): ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು ಕೊಲ್ಲುವ ವಿಫಲ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಅಮೆರಿಕ ಆರೋಪಿಸಿದ ಭಾರತೀಯ ವ್ಯಕ್ತಿ ನಿಖಿಲ್ ಗುಪ್ತಾ ಅವರನ್ನು ಜೆಕ್ ಗಣರಾಜ್ಯವು ಯುನೈಟೆಡ್ ಸ್ಟೇಟ್ಸ್ಗೆ ಹಸ್ತಾಂತರಿಸಬಹುದು ಎಂದು ಪ್ರೇಗ್ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ ಎಂದು ನ್ಯಾಯ ಸಚಿವಾಲಯ ಶುಕ್ರವಾರ ಹೇಳಿದೆ.
ಪ್ರಕರಣದಲ್ಲಿ ಸಂಬಂಧಪಟ್ಟ ಎಲ್ಲರಿಗೆ ತೀರ್ಪಿನ ಪ್ರತಿಯನ್ನು ನೀಡಿದ ಬಳಿಕ ಆರೋಪಿಯ ಗಡೀಪಾರಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ನ್ಯಾಯ ಖಾತೆ ಸಚಿವ ಪಾವೆಲ್ ಬ್ಲಾಝೆಕ್ ಅವರ ನಿರ್ಧಾರವನ್ನು ಅವಲಂಬಿಸಿದೆ ಎಂದು ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿ ಪನ್ನು ಹತ್ಯೆಗೆ ವಿಫಲ ಯತ್ನ ನಡೆಸಿದ ಆರೋಪಿ ನಿಖಿಲ್ ಗುಪ್ತಾ ವಿರುದ್ಧ ಬಾಡಿಗೆ ಕೊಲೆಗಾರರನ್ನು ಪಡೆದ ಆರೋಪ ಹೊರಿಸುವುದಾಗಿ ಕೆಲವು ದಿನಗಳ ಹಿಂದೆ ಅಮೆರಿಕದ ಅಟಾರ್ನಿ ಘೋಷಿಸಿದ್ದರು. 'ನಿಕ್' ಎಂದೇ ಗುರುತಿಸಿಕೊಂಡಿರುವ ನಿಖಿಲ್ ಗುಪ್ತಾನನ್ನು ಜೆಕ್ ಅಧಿಕಾರಿಗಳು ಅವರನ್ನು ಜೂನ್ 30, 2023 ರಂದು ಬಂಧಿಸಿದ್ದರು. ಅವರ ಗಡಿಪಾರಿನ ಪ್ರಯತ್ನಗಳು ನಡೆಯುತ್ತಿತ್ತು. ಇದೀಗ ಪ್ರೇಗ್ ಹೈಕೋರ್ಟ್ ತೀರ್ಪು ನೀಡಿದೆ.
ಗಡೀಪಾರನ್ನು ತಡೆಯಲು ಸಂಭಾವ್ಯ ಎಲ್ಲ ಹೆಜ್ಜೆಗಳನ್ನು ಗುಪ್ತಾ ಇಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕೆಳಹಂತದ ನ್ಯಾಯಾಲಯದ ನಿರ್ಧಾರದ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ, ಸುಪ್ರೀಂಕೋರ್ಟ್ ಮೊರೆ ಹೋಗಲು ಸಚಿವರಿಗೆ ಮೂರು ತಿಂಗಳ ಕಾಲಾವಕಾಶ ಇರುತ್ತದೆ.