ಲಂಡನ್, ಜ 19(DaijiworldNews/AA): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇದೀಗ ಭಾರತದಲ್ಲಿ ಅಷ್ಟೇ ಅಲ್ಲದೆ ಯುಕೆ ಸಂಸತ್ತಿನಲ್ಲೂ ಶ್ರೀ ರಾಮನ ಜಪ ಕೇಳಿಬರುತ್ತಿದೆ.
ಯುಕೆಯ ಸನಾತನ ಸಂಸ್ಥೆ (SSUK)ಯು ರಾಮಲಲ್ಲಾನ ಪ್ರಾಣ-ಪ್ರತಿಷ್ಠಾ ಸಮಾರಂಭದ ಆಚರಣೆಗಳನ್ನು ಪ್ರಾರಂಭಿಸಿದ್ದು, ಹೌಸ್ ಆಫ್ ಕಾಮನ್ಸ್ ನಲ್ಲಿ ಶ್ರೀ ರಾಮನ ಜಪ ಹಾಗೂ ಶಂಖದ ಧ್ವನಿ ಮೊಳಗಿತು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ ಪ್ರಭು ಶ್ರೀ ರಾಮನನ್ನು ’ಯುಗಪುರುಷ’ ಎಂದು ಶ್ಲಾಘಿಸುವ ಕಾರ್ಯಕ್ರಮ ಭಜನೆಯೊಂದಿಗೆ ಆರಂಭವಾಗುತ್ತದೆ. ಈ ಕಾರ್ಯಕ್ರಮವು ಯುಕೆಯ ಸನಾತನ ಸಂಸ್ಥೆಯ ಸದಸ್ಯರ ಕಾಕಭೂಶುಂಡಿ ಸಂವಾದದ ಪ್ರಸ್ತುತಿಯೊಂದಿಗೆ ಆರಂಭವಾಗುತ್ತದೆ. ಬಳಿಕ ಸಂಸ್ಥೆಯ ಸದಸ್ಯರು ಭಗವದ್ಗೀತೆಯ 12ನೇ ಅಧ್ಯಾಯವನ್ನು ಪಠಿಸುವ ಮೂಲಕ ಭಗವಾನ್ ವಿಷ್ಣುವಿನ 10ನೇ ಅವತಾರವಾದ ಕೃಷ್ಣನಿಗೆ ಗೌರವ ಸಲ್ಲಿಸುತ್ತಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರೋ ಸಂಸದ ಬಾಬ್ ಬ್ಲ್ಯಾಕ್ಮನ್, ರಾಜ್ ರಾಜೇಶ್ವರ್ ಗುರು ಮತ್ತು ಹನ್ಸ್ಲೋ ಬ್ರಹ್ಮಋಷಿ ಆಶ್ರಮದ ಸ್ವಾಮಿ ಸೂರ್ಯ ಪ್ರಭಾ ದೀದಿ ವಹಿಸಿದ್ದರು. ದೇಶಾದ್ಯಂತ 200 ಕ್ಕೂ ಹೆಚ್ಚು ದೇವಾಲಯಗಳು, ಸಮುದಾಯ ಸಂಘಟನೆಗಳು ಹಾಗೂ ಸಂಘಗಳು ಸಹಿ ಹಾಕಿರುವ ಯುಕೆ ಘೋಷಣೆಯನ್ನು ಜ. 22 ರಂದು ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.