ಟೆಹ್ರಾನ್, ಜ 03 (DaijiworldNews/PC):ಇರಾನ್ನ ದಕ್ಷಿಣ ನಗರಿ ಕೆರ್ಮಾನ್ನಲ್ಲಿ ಅವಳಿ ಬಾಂಬ್ ಸ್ಫೋಟಗೊಂಡು 103 ಮಂದಿ ಸಾವನ್ನಪ್ಪಿದ್ದು, 141 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಇರಾನ್ನ ದಕ್ಷಿಣ ನಗರಿ ಕೆರ್ಮಾನ್ನಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಅವರ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದೇ ಸಂದರ್ಭ ಅವಳಿ ಬಾಂಬ್ ಸ್ಫೋಟ ನಡೆದಿದೆ.
ಘಟನೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಸ್ಥಳದಲ್ಲಿ ಇದ್ದರು. ಈ ವೇಳೆ ಮೊದಲು ಅನಿಲ ತುಂಬಿದ ಡಬ್ಬಿಯನ್ನು ಎಸೆಯಲಾಯಿತು. ಇದು ಸಿಡಿಯುತಲೇ ಇನ್ನಷ್ಟು ಡಬ್ಬಗಳನ್ನು ನಿರಂತರವಾಗಿ ಎಸೆಯಲಾಯಿತು. ಆಗ ಭಯಾನಕ ಸ್ಪೋಟಗಳು ಸಂಭವಿಸಿದವು ಎಂದು ವರದಿ ಮೂಲಗಳಿಂದ ತಿಳಿದುಬಂದಿದೆ.
ಘಟನೆ ನಡೆಯುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಿದರು. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಕೆರ್ಮಾನ್ ಪ್ರದೇಶದ ರೆಡ್ ಕ್ಸೆಸೆಂಟ್ನ ಮುಖ್ಯಸ್ಥ ರೇಝಾ ಫಲ್ಹಾಹ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ಸರ್ಕಾರ, ಉಗ್ರರ ಕೈವಾಡ ಈ ದಾಳಿಗಳ ಹಿಂದೆ ಇರಬಹುದು ಎಂದು ಶಂಕಿಸಿದೆ. ರಕ್ಷಣಾ ಕಾರ್ಯದ ನಂತರ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.