ವ್ಯಾಟಿಕನ್ ಸಿಟಿ, ಡಿ 25 (DaijiworldNews/ AK): ಗಾಝಾದಲ್ಲಿರುವ ಫೆಲೆಸ್ತೀನೀಯರ ಹತಾಶ ಪರಿಸ್ಥಿತಿಯ ಬಗ್ಗೆ ಪೋಪ್ ಫ್ರಾನ್ಸಿಸ್ ಕ್ರಿಸ್ಮಸ್ ಸಂದೇಶದಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಕ್ಷಣ ಕದನ ವಿರಾಮ ಜಾರಿಯಾಗಬೇಕು, ಒತ್ತೆಯಾಳುಗಳ ಬಿಡುಗಡೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಅಕ್ಟೋಬರ್ 7ರಂದು ನಡೆದ ಅನಾಗರಿಕ ದಾಳಿಯ ಸಂತ್ರಸ್ತರಿಗಾಗಿ ನನ್ನ ಹೃದಯ ದುಃಖಿಸುತ್ತದೆ ಎಂದ ಅವರು, ಈಗಲೂ ಒತ್ತೆಯಲ್ಲಿ ಇರುವವರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂಬ ನನ್ನ ತುರ್ತು ಮನವಿಯನ್ನು ನಾನು ಪುನರುಚ್ಚರಿಸುತ್ತೇನೆ ಎಂದು 86 ವರ್ಷದ ಪೋಪ್ ತನ್ನ ಸಾಂಪ್ರದಾಯಿಕ ‘ಉರ್ಬಿ ಎಟ್ ಒರ್ಬಿ’ ಸಂದೇಶದಲ್ಲಿ ಹೇಳಿದ್ದಾರೆ.
ಇದೇ ವೇಳೆ ಮತ್ತೆ ಉಚ್ಚರಿಸಿದ ಪೋಪ್, ಸೇನಾ ಕಾರ್ಯಾಚರಣೆಗಳು ತಕ್ಷಣ ನಿಲ್ಲಬೇಕೆಂದು ನಾನು ಮನವಿ ಮಾಡುತ್ತೇನೆ. ಈ ಕಾರ್ಯಾಚರಣೆಗಳು ಭಾರೀ ಪ್ರಮಾಣದಲ್ಲಿ ಅಮಾಯಕ ನಾಗರಿಕರ ಬಲಿ ಪಡೆದಿದೆ.
ಗಾಝಾದಲ್ಲಿ ನೆಲೆಸಿರುವ ಅತ್ಯಂತ ಅಮಾನವೀಯ ಪರಿಸ್ಥಿತಿಗೆ ಪರಿಹಾರವೊಂದನ್ನು ಕಂಡುಕೊಳ್ಳಬೇಕೆಂದು ನಾನು ಕರೆ ನೀಡುತ್ತೇನೆ.’ ಎಂದು ವ್ಯಾಟಿಕನ್ನ ಸೇಂಟ್ ಪೀಟರ್ಸ್ ಬ್ಯಾಸಿಲಿಕದಲ್ಲಿ ನೆರೆದ ಸಾವಿರಾರು ಅನುಯಾಯಿಗಳನ್ನು ಉದ್ದೇಶಿಸಿ ಪೋಪ್ ಹೇಳಿದರು.