ಜೆರುಸಲೆಂ, ನ 27(DaijiworldNews/MR): ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಘೋಷಣೆಯಾದ ಕದನ ವಿರಾಮದ ನಿಯಮಗಳಿಗೆ ತಕ್ಕಂತೆ ಹಮಾಸ್ ಉಗ್ರರು 3ನೇ ಹಂತದಲ್ಲಿ ಇಸ್ರೇಲ್ನ 13 ನಾಗರಿಕರು ಸೇರಿ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.
ಇಸ್ರೇಲ್ನ 13 ನಾಗರಿಕರು, ಮೂವರು ಥಾಯ್ಲೆಂಡ್ ನಾಗರಿಕರು ಹಾಗೂ ಅಮೆರಿಕದ ನಾಲ್ಕು ವರ್ಷದ ಬಾಲಕಿ ಸೇರಿ 17 ನಾಗರಿಕರನ್ನು ಹಮಾಸ್ ಬಿಡುಗಡೆ ಮಾಡಿದೆ. ಅತ್ತ, ಇಸ್ರೇಲ್ ಕೂಡ ಪ್ಯಾಲೆಸ್ತೀನ್ ನ 39 ಕೈದಿಗಳನ್ನು ಬಿಡುಗಡೆ ಮಾಡಿದೆ.
ಹಮಾಸ್ ಉಗ್ರರು ಮೂರೂ ಹಂತಗಳಲ್ಲಿ ಒಟ್ಟು 69 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದಂತಾಗಿದೆ. ಸೋಮವಾರ ನ. 27ರಂದು ನಾಲ್ಕನೇ ಹಂತದಲ್ಲಿ ಇನ್ನಷ್ಟು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ನಾಲ್ಕು ದಿನಗಳವರೆಗೆ ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ಕದನ ವಿರಾಮ ಘೋಷಣೆಯಾಗಿದೆ.
ಮತ್ತೊಂದೆಡೆ, ಹಮಾಸ್ ಉಗ್ರರು ಅಮೆರಿಕದ ನಾಲ್ಕು ವರ್ಷದ ಬಾಲಕಿಯನ್ನು ಬಿಡುಗಡೆ ಮಾಡಿರುವುದನ್ನು ಅಮೆರಿಕ ದೃಢಪಡಿಸಿದೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ತಾತ್ಕಾಲಿಕ ಕದನ ವಿರಾಮದ ಒಪ್ಪಂದದ ಪ್ರಕಾರ, ಹಮಾಸ್ ಉಗ್ರರು ನ 24ರಂದು ಮೊದಲ ಹಂತದಲ್ಲಿ 13 ಇಸ್ರೇಲಿ ಪ್ರಜೆಗಳು ಸೇರಿ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರು.
ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ರೆಡ್ ಕ್ರಾಸ್ಗೆ ಹಸ್ತಾಂತರಿಸಿದ್ದರು.ಬಿಡುಗಡೆಯಾದ ಒತ್ತೆಯಾಳುಗಳ ಪೈಕಿ 12 ಥಾಯ್ ಪ್ರಜೆಗಳಿದ್ದರು. ಎರಡನೇ ಹಂತದಲ್ಲಿ ನ 25ರಂದು 17 ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಬಿಡುಗಡೆಗೊಳಿಸಿದ್ದರು.
ಹಮಾಸ್ ಉಗ್ರರ ದಾಳಿಗೆ ಪ್ರತಿದಾಳಿ ಆರಂಭಿಸಿದ ಇಸ್ರೇಲ್ ಸೇನೆಯು ಗಾಜಾ ನಗರದ ಮೇಲೆ ಭಾಗಶಃ ಹಿಡಿತ ಸಾಧಿಸಿದ್ದರು. ನಿರಂತರ ದಾಳಿ ಮೂಲಕ ಸಾವಿರಾರು ಜನರನ್ನು ಹತ್ಯೆಗೈದಿದ್ದರು. ಹಾಗಾಗಿ, ಕತಾರ್ ಮಧ್ಯಪ್ರವೇಶಿಸಿ ಕದನವಿರಾಮಕ್ಕೆ ಕರೆ ನೀಡಿದೆ.
ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಕೊನೆಗೆ ಒಪ್ಪಿದೆ. ಅದರಂತೆ, ಈಜಿಪ್ತ್ ಮೂಲಕ 17 ಒತ್ತೆಯಾಳುಗಳನ್ನು ಇಸ್ರೇಲ್ಗೆ ಹಸ್ತಾಂತರ ಮಾಡಲಾಗಿದೆ.