ಬ್ಯೂನಸ್ ಐರಿಸ್, ನ.16 (DaijiworldNews/AK):ಅರ್ಜೆಂಟೀನಾದಲ್ಲಿ ಏರ್ ಶೋ ನಡೆಯುತ್ತಿದ್ದ ವೇಳೆ ಫೈಟರ್ ಜೆಟ್ ಪತನಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ ಗಳು ದುರ್ಮರಣಗೊಂಡಿದ್ದಾರೆ.
ಅರ್ಜೆಂಟೀನಾದ ಸಾಂಟಾ ಫೆ ಪ್ರಾಂತ್ಯದ ವಿಲ್ಲಾ ಕೆನಾಸ್ನಲ್ಲಿ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಪೈಲಟ್ಗಳಾದ ಗ್ಯಾಸ್ಟನ್ ವನೂಚಿ ಮತ್ತು ನಿಕೋಲಸ್ ಸ್ಕೇರ್ಸ್ ರಕ್ಷಣಾ ತಂಡವು ಘಟನಾ ಸ್ಥಳಕ್ಕೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಫೈಟರ್ ಜೆಟ್ ಪತನಕ್ಕೂ ಮುನ್ನ ಏರ್ ಶೋನಲ್ಲಿ ವೈಮಾನಿಕ ಸಾಹಸಗಳನ್ನು ಪ್ರದರ್ಶಿಸುತ್ತಿತ್ತು.
ಸೋವಿಯತ್ ಯುಗದ L29 ಡಾಲ್ಫಿನ್ ಮಿಲಿಟರಿ ತರಬೇತಿ ಜೆಟ್ ವಿಮಾನವು ತನ್ನ ಏರೋಬ್ಯಾಟಿಕ್ಸ್ನೊಂದಿಗೆ ಪ್ರೇಕ್ಷಕರನ್ನು ರಂಜಿಸಿದ ಕ್ಷಣ ಮಾತ್ರದಲ್ಲಿ ಪತನಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಲ್ಲಾ ಕ್ಯಾನಸ್ನ ಅಗ್ನಿಶಾಮಕ ಮುಖ್ಯಸ್ಥ ಹೊರಾಸಿಯೊ ಪೆರೇರಾ, ಏರ್ ಶೋ ವೀಕ್ಷಿಸಲು ಸಾರ್ವಜನಿಕರು ನೆರೆದಿದ್ದ ಸ್ಥಳದಿಂದ ಕೆಲವು ಮೀಟರ್ಗಳಷ್ಟು ದೂರದಲ್ಲಿ ವಿಮಾನ ಅಪಘಾತಕ್ಕೀಡಾಯಿತು ಎಂದು ಹೇಳಿದ್ದಾರೆ. ರಷ್ಯಾದ ಮಾಡೆಲ್ ಎಂದು ವರದಿಯಾಗಿರುವ ವಿಮಾನವು ತಿರುವು ತೆಗೆದುಕೊಂಡ ನಂತರ ಪತನವಾಗಿದೆ.ಅರ್ಜೆಂಟೀನಾದ ಏರ್ ಕ್ಲಬ್, ದುರಂತ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪೈಲಟ್ಗಳಿಗೆ ಸಂತಾಪ ಸೂಚಿಸಿದೆ.