ಅಮೇರಿಕಾ, ನ 08 (DaijiworldNews/MR): ಇಂಡಿಯಾನಾ ರಾಜ್ಯದ ಜಿಮ್ನಲ್ಲಿ ಚೂರಿ ಇರಿತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿ ವರುಣ್ ರಾಜ್ ಸಾವನ್ನಪ್ಪಿದ್ದಾನೆ.
ಮೂಲತಃ ತೆಲಂಗಾಣದ ಖಮ್ಮಂ ಜಿಲ್ಲೆಯ ಪುಚ್ಚಾ ನಿವಾಸಿಯಾಗಿದ್ದ ಪಿ. ವರುಣ್ ರಾಜ್(24) ಇಂಡಿಯಾನಾದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದು, ಅಕ್ಟೋಬರ್ 29ರಂದು ಜಿಮ್ನಲ್ಲಿದ್ದಾಗ ಜೋರ್ಡಾನ್ ಆಂಡ್ರೇಡ್ (24) ಎಂಬಾತ ಚಾಕುವಿನಿಂದ ಇರಿದಿದ್ದ. ಘಟನೆಯ ನಂತರ ಆರೋಪಿ ಜೋರ್ಡಾನ್ ಆಂಡ್ರೇ ಡ್ ನನ್ನು ಪೊಲೀಸರು ಬಂಧಿಸಿದ್ದರು.
ಗಂಭೀರ ಸ್ವರೂಪದ ಗಾಯಗಳಾಗಿರುವ ಕಾರಣ ವರುಣ್ ರಾಜ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟ್ ವೇನ್ನಲ್ಲಿರುವ ಲುಥೆರನ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವರುಣರಾಜ್ ಒಂಬತ್ತು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಮಂಗಳವಾರ ಮೃತಪಟ್ಟಿದ್ದಾರೆ. . ಈ ಬಗ್ಗೆ ಅಮೆರಿಕದ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ವರುಣ್ ರಾಜ್ ಸಾವಿನ ನಂತರ ಅವರ ಕುಟುಂಬ ಶೋಕದಲ್ಲಿ ಮುಳುಗಿದೆ. ವರುಣನ ಮೃತ ದೇಹವನ್ನು ಭಾರತಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ.
ಇದೇ ವೇಳೆ ದಾಳಿ ನಡೆದ ಮೂರು ದಿನಗಳ ಬಳಿಕ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ಪ್ರತಿಕ್ರಿಯಿಸಿ ವಿಷಾದ ವ್ಯಕ್ತಪಡಿಸಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.