ಫೋರಿಡಾ,ಏ15(AZM):ಕ್ಯಾಸೋವಾರಿ ಜಾತಿಯ ಪಕ್ಷಿಗಳನ್ನು ಸಾಕುವ ಮುನ್ನ ಈ ವರದಿಯನ್ನು ಓದಿ. ಯಾಕೆಂದರೆ ಫ್ಲೋರಿಡಾದಲ್ಲಿ ಕ್ಯಾಸ್ಸೋವಾರಿ ಜಾತಿಗೆ ಸೇರಿದ ಪಕ್ಷಿ ತನ್ನನ್ನು ಸಾಕಿ ಬೆಳೆಸಿದ ಮಾಲೀಕನನ್ನೇ ಕೊಂದು ಹಾಕಿದೆ.
ಮಾರ್ವಿನ್ ಹೆಜೋಸ್(75) ಮೃತ ವ್ಯಕ್ತಿ. ಹೆಜೋಸ್ ಎಂಬವರು ಫ್ಲೋರಿಡಾ ನಿವಾಸದ ಸಮೀಪದಲ್ಲೇ ಖಾಸಗಿ ಫಾರ್ಮ್ ಹೌಸ್ ನಿರ್ಮಾಣ ಮಾಡಿಕೊಂಡು ದಶಕಗಳಿಂದಲೂ ಇಲ್ಲಿ ಅಪರೂಪದ ತಳಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕುತ್ತಿದ್ದರು. ಇತ್ತೀಚೆಗೆ ಅವರು ತನ್ನ ನಿವಾಸದ ಮಹಡಿ ಮೇಲೆ ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಈ ಕ್ಯಾಸೋವಾರಿ ಪಕ್ಷಿ ಹೆಜೋಸ್ ಎಂಬವರ ಮೇಲೆ ದಾಳಿ ಮಾಡಿ ಕುತ್ತಿಗೆಯನ್ನು ಕಚ್ಚಿ ಹಾಕಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಮಾರ್ವಿನ್ ಹೆಜೋಸ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಸುಮಾರು ಹೊತ್ತಿನ ಬಳಿಕ ಸ್ಥಳಕ್ಕಾಗಮಿಸಿದ ಮನೆಯವರು ಹೆಜೋಸ್ ಕೆಳಗೆ ಬಿದ್ದಿರುವುದನ್ನು ಗಮನಿಸಿ ಹತ್ತಿರ ಹೋದಾಗ ಸಾವನ್ನಪ್ಪಿರುವುದು ತಿಳಿದಿದೆ.
ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪಕ್ಷಿಯನ್ನು ವಶಕ್ಕೆ ತೆಗೆದುಕೊಂಡು ಅದನ್ನು ಪ್ರತ್ಯೇಕವಾಗಿರಿಸಿದ್ದಾರೆ. ಇನ್ನು ಪಕ್ಷಿಗೆ ಮಾರ್ವಿನ್ ಮೇಲೆ ಏಕೆ ಕೋಪವಿತ್ತು ಎಂಬುದನ್ನು ಪೊಲೀಸರು ತಜ್ಞರ ನೆರವಿನಿಂದ ತನಿಖೆ ನಡೆಸುತ್ತಿದ್ದಾರೆ.
ಪ್ರಮುಖವಾಗಿ ಪಕ್ಷಿ ಪ್ರಭೇದದಲ್ಲಿ ಅತ್ಯಂತ ಅಪರೂಪದ ಪ್ರಭೇದ ಇದಾಗಿದ್ದು, ಜಗತ್ತಿನ ಅತ್ಯಂತ ಅಪಾಯಕಾರಿ ಪಕ್ಷಿಗಳಲ್ಲಿ ಈ ಕ್ಯಾಸೋವಾರಿ ಕೂಡ ಒಂದು.. ಹಾರಲಾರದ ದೈತ್ಯ ದೇಹಿಯಾಗಿರುವ ಈ ಕ್ಯಾಸೋವಾರಿ ಸುಮಾರು 60 ಕೆಜಿಗಳ ವರೆಗೂ ತೂಕ ಹೊಂದಿರುತ್ತದೆ. ಇವು ಸುಮಾರು 8 ಅಡಿಗಳವರೆಗೂ ಬೆಳೆಯುತ್ತವೆ. ಇವುಗಳ ಶಕ್ತಿ ಎಂದರೆ ಇವುಗಳ ಪಾದಗಳು. ದೈತ್ಯಾಕಾರದ ಪಾದಗಳ ನೆರವಿನಿಂದ ಇವು ಎಂತಹ ಬಲಿಷ್ಟ ವ್ಯಕ್ತಿಯನ್ನಾದರೂ ಕಾಲಿನಿಂದ ತುಳಿದು ಅಲುಗಾಡದಂತೆ ಮಾಡುತ್ತವೆ. ಅಲ್ಲದೆ ಇವುಗಳ ಕಾಲಿನಲ್ಲಿರುವ ಉಗುರುಗಳು ಬರೊಬ್ಬರಿ 10 ಸೆಂ.ಮೀಗಳವರೆಗೂ ಬೆಳೆಯುತ್ತವೆ. ಅಂತೆಯೇ ತನ್ನ ಬಲಿಷ್ಟ ಕೊಕ್ಕುಗಳಿಂದ ಈ ಪಕ್ಷಿ ಒಂದೇ ಏಟಿಗೆ ಎಂತಹ ಬಲಿಷ್ಠ ವ್ಯಕ್ತಿಯಾದರೂ ಕುಕ್ಕಿ ಕೊಂದು ಹಾಕಿ ಬಿಡುತ್ತವೆ.