ಢಾಕಾ: ಅ.23 (DaijiworldNews/AA/AK): ಪ್ರಯಾಣಿಕರ ರೈಲು , ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಸಾವು, ಹಲವರಿಗೆ ಗಾಯಗೊಂಡ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದ ಭೈರಬ್ನಲ್ಲಿ ನಡೆದಿದೆ.
ಅಪಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಸಿರಾಜುಲ್ ಇಸ್ಲಾಂ ಮಾಹಿತಿ ನೀಡಿದ್ದಾರೆ.
ಈಗಾಗಲೇ 15 ಶವಗಳನ್ನು ಹೊರತೆಗೆದಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ ಅಂದಾಜಿಸಲಾಗಿದೆ. ಇಂದು ಸಂಜೆ 4 ಗಂಟೆ ವೇಳೆ ರೈಲು ಅಪಘಾತ ನಡೆದಿದ್ದು, ಒಂದು ರೈಲು ಇನ್ನೊಂದು ಮಾರ್ಗವನ್ನು ಪ್ರವೇಶಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಭೈರಬ್ನ ಸರ್ಕಾರಿ ಆಡಳಿತಾಧಿಕಾರಿ ಸಾದಿಕುರ್ ರೆಹಮಾನ್ ಎಎಫ್ ಪಿ ಹೇಳಿದ್ದಾರೆ.
ಹಾನಿಗೊಳಗಾದ ಕೋಚ್ಗಳ ಕೆಳಗೆ ಇನ್ನೂ ಗಾಯಗೊಂಡವರು ಇದ್ದು ಹಲವಾರು ಮಂದಿ ರೈಲಿನ ಅಡಿ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅಪಘಾತ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ.
ಬಾಂಗ್ಲಾದೇಶದಲ್ಲಿ ರೈಲು ಅಪಘಾತಗಳು ಸಾಮಾನ್ಯವಾಗಿದ್ದು, ಕಳಪೆ ಸಿಗ್ನಲಿಂಗ್, ನಿರ್ಲಕ್ಷ್ಯ, ಹಳೆಯ ಟ್ರ್ಯಾಕ್ಗಳು ಅಥವಾ ಇನ್ನಿತರ ಕಡಿಮೆ ಮೂಲಸೌಕರ್ಯಗಳಿಂದ ಅಪಘಾತಗಳು ಸಂಭವಿಸುತ್ತದೆ.