ಇಟಲಿ, ಅ 04 (DaijiworldNews/MS): ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ಯಾಂಪ್ಗ್ರೌಂಡ್ಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಉತ್ತರ ಇಟಲಿಯ ವೆನಿಸ್ ಬಳಿಯ ಮೇಲ್ಸೇತುವೆಯಿಂದ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 21 ಪ್ರವಾಸಿಗರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಟಲಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಸೇತುವೆ ಮೇಲಿಂದ ಮೂವತ್ತು ಅಡಿ ಆಳಕ್ಕೆ ಬೀಳುವ ವೇಳೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ಬಸ್ಸಿಗೆ ಬೆಂಕಿ ಹತ್ತಿಕೊಂಡು ಅವಘಡ ಸಂಭವಿಸಿದೆ ಬಸ್ಸಿನಲ್ಲಿದ್ದ 15 ಮಂದಿಯನ್ನು ಮಾತ್ರ ಉಳಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 3 ರಂದು ಸಂಜೆ ಈ ಘಟನೆ ಸಂಭವಿಸಿದೆ. ಇಲ್ಲಿಯವರೆಗೆ ಗುರುತಿಸಲಾದ ಮೃತದೇಹಗಳನ್ನು ಉಕ್ರೇನಿಯನ್ ಪ್ರವಾಸಿಗರು ಎಂದು ಸ್ಥಳೀಯ ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.
ಬಸ್ ಚಾಲಕ ಅಪಘಾತಕ್ಕೂ ಮುನ್ನ ಅಸ್ವಸ್ಥನಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಡೆಗೋಡೆಯನ್ನು ಮುರಿದು ಬಸ್ ಸೇತುವೆಯಿಂದ ಕೆಳಗೆ ಉರುಳಿಬಿದ್ದಿದೆ.