ಕ್ಯಾಲಿಫೋರ್ನಿಯಾ, ಸೆ 18 (DaijiworldNews/AK): ಮೀನು ತಿಂದ ಮಹಿಳೆಯೊಬ್ಬರು ತನ್ನ ದೇಹದ ನಾಲ್ಕು ಅಂಗಾಂಗವನ್ನೇ ಕಳೆದುಕೊಂಡ ವಿಚಿತ್ರ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದಿದೆ.
ಕ್ಯಾಲಿಫೋರ್ನಿಯಾದ ಲಾರಾ ಬರಾಜಾಸ್(40) ಎಂಬ ಮಹಿಳೆ ಅಂಗಾಂಗ ಕಳೆದುಕೊಂಡಿರುವ ನತದಷ್ಟೆ.ಮಾರಣಾಂತಿಕ ಬ್ಯಾಕ್ಟೀರಿಯಾವಿರುವ ಮೀನುಗಳನ್ನು ತಿಂದ ಹಿನ್ನಲೆ ಲಾರಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಅಂಗಾಂಗಗಳು ವೈಫಲ್ಯವಾಗಿದ್ದು ಇದರಿಂದ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಹಿಳೆಯ ಜೀವ ರಕ್ಷಣೆಗಾಗಿ ಎರಡು ಕೈಗಳು ಹಾಗೂ ಎರಡು ಕಾಲುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದಾರೆ. ಇದೀಗ ಅಂಗಾಂಗ ಕಳೆದುಕೊಂಡ ಮಹಿಳೆ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್ನಿಂದ ಕಲುಷಿತಗೊಂಡಿರುವ ಕಡಿಮೆ ಬೇಯಿಸಿದ ತಿಲಾಪಿಯಾ ಮೀನಿನ ಸೇವನೆಯಿಂದ ಈ ಸಮಸ್ಯೆ ಎದುರಾಗಿದೆ ಎಂದು ಲಾರಾ ಅವರ ಸ್ನೇಹಿತರು ಟ್ವೀಟ್ ಮಾಡಿದ್ದಾರೆ.
ಲಾರಾ ಬರಾಜಾಸ್ ಆಸ್ಪತ್ರೆಯಲ್ಲಿತಿಂಗಳುಗಳ ಕಾಲದ ಚಿಕಿತ್ಸೆ ಪಡೆದ ನಂತರ ಗುರುವಾರ ಜೀವರಕ್ಷಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸ್ಯಾನ್ ಜೋಸ್ನ ಸ್ಥಳೀಯ ಮಾರುಕಟ್ಟೆಯಲ್ಲಿ ಲಾರಾ ತಿಲಾಪಿಯಾ ಮೀನನ್ನು ಖರೀದಿಸಿದ್ದರು ಎಂದು ಆಕೆಯ ಸ್ನೇಹಿತೆ ಟ್ವೀಟ್ ಮಾಡಿದ್ದಾರೆ.ಮೀನಿನಲ್ಲಿದ್ದ ವಿಬ್ರಿಯೊ ವಲ್ನಿಫಿಕಸ್ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾವು ಮಹಿಳೆಯ ದೇಹ ಸೇರಿ ಅರೋಗ್ಯ ಸಮಸ್ಯೆ ತಲೆದೂರಿದೆ ಅಲ್ಲದೆ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇದೀಗ ಕೋಮಾದಲ್ಲಿರುವ ಮಹಿಳೆಯ ದೇಹದ ಭಾಗಗಳು ಕಪ್ಪು ಬಣ್ಣಕ್ಕೆ ತಿರುಗಿದ್ದು ಮೂತ್ರಪಿಂಡಗಳೂ ವೈಫಲ್ಯವಾಗಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ, ಜೊತೆಗೆ ತಿಲಾಪಿಯಾ ಮೀನುಗಳ ಬಗ್ಗೆ ಜನ ಎಚ್ಚರಿಕೆ ವಹಿಸುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.