ಜಕಾರ್ತ, ಸೆ 07 (DaijiworldNews/MS): ಸಂಪರ್ಕ, ಡಿಜಿಟಲ್ ಪರಿವರ್ತನೆ, ಭಯೋತ್ಪಾದನೆ ನಿಗ್ರಹ, ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆಯಂತಹ ಕ್ಷೇತ್ರಗಳಲ್ಲಿ ಭಾರತ-ಆಸಿಯಾನ್ ಸಹಕಾರವನ್ನು ಬಲಪಡಿಸುವ 12 ಅಂಶಗಳ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಂಡಿಸಿದರು.
ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ನಡೆದ 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.
ಆಸಿಯಾನ್-ಭಾರತ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಪಾಲುದಾರಿಕೆಯು ನಾಲ್ಕನೇ ದಶಕವನ್ನು ತಲುಪಿದೆ. ಈ ಶೃಂಗಸಭೆಯ ಸಹ ಅಧ್ಯಕ್ಷರಾಗಿರುವುದು ನನಗೆ ಹೆಮ್ಮೆ ತಂದಿದೆ. ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಲು ಮತ್ತು ಮುಕ್ತ ಇಂಡೋ-ಪೆಸಿಫಿಕ್ ಖಾತ್ರಿಗೆ ಉಭಯ ಪಕ್ಷಗಳು ಸಾಮಾನ್ಯ ಆಸಕ್ತಿಯನ್ನು ಹೊಂದಿವೆ ಎಂದು ಹೇಳಿದರು. ಈ ಗುರಿಗಳನ್ನು ಸಾಧಿಸಲು ಭಾರತವು ಎಲ್ಲಾ ಆಸಿಯಾನ್ ಸದಸ್ಯರೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದೆ ಎಂದು ಅವರು ಹೇಳಿದರು