ಬುಕಾರೆಸ್ಟ್ , ಆ 27 (DaijiworldNews/AK): ರೊಮೇನಿಯನ್ ಪಟ್ಟಣವಾದ ಕ್ರೆವೆಡಿಯಾದಲ್ಲಿ ಪೆಟ್ರೋಲಿಯಂ ಗ್ಯಾಸ್ ಸ್ಟೇಷನ್ನಲ್ಲಿ ಎರಡು ಸ್ಫೋಟಗಳು ಸಂಭವಿಸಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು 46 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೊದಲ ಸ್ಫೋಟದಿಂದ ಬೆಂಕಿ ಗ್ಯಾಸ್ ಸ್ಟೇಷನ್ ನ ಎರಡು ಟ್ಯಾಂಕ್ಗಳಿಗೆ ಮತ್ತು ಹತ್ತಿರದ ಮನೆಗಳಿಗೆ ಹರಡಿತು, ಇದರಿಂದಾಗಿ ಹೆಚ್ಚಿನ ಜನ ಗಾಯಗೊಂಡರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಸುಮಾರು 700 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸಂಚಾರ ನಿರ್ಬಂಧಿಸಲಾಯಿತು ಎಂದು ಹೇಳಿದೆ.
ಇತ್ತ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಂಜೆ ವೇಳೆಗೆ ಎಲ್ಪಿಜಿ ಸ್ಟೇಷನ್ನಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು ಇದರಿಂದ 26 ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತುರ್ತು ಪ್ರತಿಕ್ರಿಯೆ ಘಟಕದ ಉಸ್ತುವಾರಿ ವಹಿಸಿರುವ ಉಪ ಆಂತರಿಕ ಸಚಿವ ರೇದ್ ಅರಾಫತ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
46 ಮಂದಿ ಗಾಯಗೊಂಡವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಪ್ರಧಾನಿ ಮಾರ್ಸೆಲ್ ಸಿಯೊಲಾಕು ಅವರು ಗಂಭೀರ ಸ್ಥಿತಿಯಲ್ಲಿರುವ ನಾಲ್ವರು ರೋಗಿಗಳನ್ನು ಇಂದು ರಾತ್ರಿ ಇಟಲಿ ಮತ್ತು ಬೆಲ್ಜಿಯಂನ ಆಸ್ಪತ್ರೆಗಳಿಗೆ ವರ್ಗಾಯಿಸಲು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಸುಮಾರು 25 ಅಗ್ನಿಶಾಮಕ ವಾಹನಗಳು ಕಾರ್ಯಚರಣೆ ನಡೆಸುತ್ತಿದ್ದು, ಇನ್ನೂ ಬೆಂಕಿಯನ್ನು ನಂದಿಸಲಾಗಿಲ್ಲ ಎನ್ನಲಾಗಿದೆ. ಸೈಟ್ನಲ್ಲಿ ಮೂರನೇ ಟ್ಯಾಂಕ್ ಅಪಾಯವನ್ನುಂಟು ಮಾಡುವುದರಿಂದ ಹೆಚ್ಚಿನ ಸ್ಫೋಟಗಳು ಸಂಭವಿಸಬಹುದು ಎಂದು ಸಚಿವ ರೇದ್ ಅರಾಫತ್ ಮಾಹಿತಿ ನೀಡಿದ್ದಾರೆ.