ಟ್ರಿಪೋಲಿ,ಆ 21(DaijiworldNews/AK): ಲಿಬಿಯಾದಲ್ಲಿ ಸಶಸ್ತ್ರ ಗುಂಪಿನ ವಶದಲ್ಲಿದ್ದ 17 ಭಾರತೀಯರನ್ನು ಬಿಡುಗಡೆಗೊಳಿಸಲಾಗಿದೆ. ಟುನಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಕಾರದಿಂದ ಸ್ವದೇಶಕ್ಕೆ ಮರಳಿ ಕರೆತರಲಾಯಿತು ಎಂದು ಮಾಧ್ಯಮ ವರದಿ ಮಾಡಿದೆ.
ಸೆರೆಯಾದವರ ಪೈಕಿ ಹೆಚ್ಚಿನವರು ಪಂಜಾಬ್ ಮತ್ತು ಹರ್ಯಾಣದವರು ಎನ್ನಲಾಗಿದೆ. ಕಳೆದ ಮೇ 26 ರಂದು ಈ ಬಗ್ಗೆ ಟುನಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತರಲಾಯಿತು. ಭಾರತದಿಂದ ಕಳ್ಳಸಾಗಣೆ ಮಾಡಿದ ನಂತರ ಲಿಬಿಯಾದ ಜ್ವಾರಾ ನಗರದಲ್ಲಿ ಸಶಸ್ತ್ರ ಗುಂಪು ಇವರನ್ನು ವಶಕ್ಕೆ ತೆಗೆದುಕೊಂಡಿತ್ತು.
ಟುನಿಸ್ನಲ್ಲಿರುವ ಭಾರತೀಯ ರಾಜತಾಂತ್ರಿಕರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಧ್ಯಪ್ರವೇಶದ ಬಳಿಕ 17 ಮಂದಿಯನ್ನು ಲಿಬಿಯಾದಿಂದ ಸ್ಥಳಾಂತರಿಸಲಾಯಿತು. ಬಳಿಕ ಅವರು ಆಗಸ್ಟ್ 20 ರಂದು ಸಂಜೆ ನವದೆಹಲಿಗೆ ಮರಳಿದ್ದಾರೆ.
ಈ ಪ್ರಕರಣವನ್ನು ಭಾರತೀಯ ಪ್ರಜೆಗಳ ಕುಟುಂಬ ಸದಸ್ಯರು ಟುನಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದಾರೆ. ರಾಯಭಾರ ಕಚೇರಿಯು ಕುಟುಂಬಗಳೊಂದಿಗೆ ನಿಕಟ ಸಂಪರ್ಕದಲ್ಲಿತ್ತು. ಜೂನ್ 13 ರಂದು, ಲಿಬಿಯಾ ಅಧಿಕಾರಿಗಳು ಭಾರತೀಯ ಪ್ರಜೆಗಳನ್ನು ರಕ್ಷಿಸಿದ್ದರು. ಆದರೆ ಈ ಭಾರತೀಯರು ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಾರೆಂದು ಅವರನ್ನು ತಮ್ಮ ವಶದಲ್ಲಿ ಇರಿಸಿಕೊಂಡರು ಎಂದು ಮೂಲಗಳು ಹೇಳಿವೆ.
ಟುನಿಸ್ನಲ್ಲಿರುವ ಭಾರತೀಯ ರಾಯಭಾರಿ ಎನ್ಜೆ ಗ್ಯಾಂಗ್ಟೆ ಮತ್ತು ನವದೆಹಲಿಯ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಮಧ್ಯಸ್ಥಿಕೆಯ ನಂತರ, ಲಿಬಿಯಾ ಅಧಿಕಾರಿಗಳು ಭಾರತೀಯರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡರು ಎನ್ನಲಾಗಿದೆ.
ಅವರು ಲಿಬಿಯಾದಲ್ಲಿದ್ದ ಸಮಯದಲ್ಲಿ, ಭಾರತೀಯ ರಾಯಭಾರ ಕಚೇರಿಯು ಆಹಾರ, ಔಷಧಗಳು ಮತ್ತು ಬಟ್ಟೆ ಸೇರಿದಂತೆ ಭಾರತೀಯರ ಅಗತ್ಯಗಳನ್ನು ನೋಡಿಕೊಳ್ಳುತ್ತಿತ್ತು. ಅವರು ಪಾಸ್ಪೋರ್ಟ್ಗಳನ್ನು ಹೊಂದಿಲ್ಲದ ಕಾರಣ, ಭಾರತಕ್ಕೆ ಪ್ರಯಾಣಿಸಲು ತುರ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.
17 ಭಾರತೀಯರಿಗೆ ಟಿಕೆಟ್ಗಳನ್ನು ಭಾರತೀಯ ರಾಯಭಾರ ಕಚೇರಿಯಿಂದ ಒದಗಿಸಿದ್ದು ಅದಕ್ಕೆ ರಾಯಭಾರ ಕಚೇರಿಯೇ ಪಾವತಿ ಮಾಡಿದೆ ಎನ್ನಲಾಗಿದೆ.